

ಬೆಂಗಳೂರು: ಆದಾಯ ತೆರಿಗೆ ವಂಚನೆಗೆ ಸಹಕರಿಸಿದ ಆರೋಪದ ಮೇಲೆ ಇನ್ಪೋಸಿಸ್ ಕಂಪನಿಯ ಮೂವರು ನೌಕರರನ್ನು ಎಲೆಕ್ಟ್ರಾನಿಕ್ಸ್ಸಿಟಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕಲ್ಯಾಣ್ ಕುಮಾರ್, ಪ್ರಕಾಶ್ ಮತ್ತು ದೇವೇಶ್ವರ್ ರೆಡ್ಡಿ ಬಂಧಿತರು. ಇವರಿಂದ 3 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ (ಐಟಿ) ತೆರಿಗೆ ಸಂಗ್ರಹದ ಪ್ರಾಜೆಕ್ಟ್ (ಸಿಪಿಸಿ) ವಿಭಾಗದಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ತೆರಿಗೆ ಪಾವತಿದಾರರಿಂದ ಕಮಿಷನ್ ಪಡೆದು ತೆರಿಗೆ ವಂಚನೆಗೆ ನೆರವಾಗುತ್ತಿದ್ದರು. ಈ ಬಗ್ಗೆ ಐಟಿ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆರಿಗೆ ವಸೂಲಿಯ ಸಿಪಿಸಿ ಪ್ರಾಜೆಕ್ಟ್ಗೆ ಐಟಿ ಇಲಾಖೆಯು ಇನ್ಪೋಸಿಸ್ ನೆರವು ಪಡೆದಿದೆ. ಸಿಪಿಸಿ ಪ್ರಾಜೆಕ್ಟ್ನಲ್ಲಿ ಕಲ್ಯಾಣ್, ಪ್ರಕಾಶ್ ಮತ್ತು ದೇವೇಶ್ವರ್ ಕೆಲಸ ಮಾಡುತ್ತಿದ್ದರು. ಐಟಿ ರಿಟರ್ನ್ಸ್ ಕುರಿತು ಇಲಾಖೆಗೆ ಜನರು ದಾಖಲೆ ಸಲ್ಲಿಸುತ್ತಾರೆ. ತೆರಿಗೆ ಮರುಪಾವತಿ ಮಾಡಿಕೊಳ್ಳುವವರಿಗೆ 7 ದಿನಗಳಲ್ಲಿ ಹಣ ಪಡೆಯಲು ಅವಕಾಶವಿದೆ.
ಈ ಅವಕಾಶವನ್ನು ಬಳಸಿಕೊಂಡ ಆರೋಪಿಗಳು, ತೆರಿಗೆದಾರರಿಂದ ಹಣ ಪಡೆದು ಸುಳ್ಳು ಮಾಹಿತಿ ನೀಡಿ ಇಲಾಖೆಗೆ ವಂಚಿಸುತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಐಟಿ ನಿರ್ದೇಶಕ ಸಿಬಿಚೆನ್ ಮ್ಯಾಥ್ಯೂ, ಇಲಾಖಾ ತನಿಖೆ ನಡೆಸಿದಾಗ ಕಮಿಷನ್ ಪಡೆದು ತೆರಿಗೆ ವಂಚನೆಗೆ ಇವರು ಸಹಕರಿಸಿರುವುದು ಖಚಿತವಾಗಿದೆ. ಈ ವರದಿ ಆಧರಿಸಿ ಎಲೆಕ್ಟ್ರಾನಿಕ್ಸ್ಸಿಟಿ ಠಾಣೆಗೆ ದೂರು ನೀಡಿದ್ದರು. ವಂಚನೆ (ಐಪಿಸಿ 420) ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.