ಕಸದ ರಾಶಿಯಲ್ಲಿದ್ದ ರಾಸಾಯನಿಕ ಸ್ಫೋಟ: ಬೆಚ್ಚಿಬಿದ್ದ ಬೆಂಗಳೂರಿಗರು

adugodi 8 mar 20
Published on

ಬೆಂಗಳೂರು: ಕಸದ ರಾಶಿಯಲ್ಲಿ ಅಡಗಿದ್ದ ರಾಸಾಯನಿಕ ಸ್ಫೋಟಗೊಂಡು ಚಿಂದಿ ಸಂಗ್ರಹಿಸುತ್ತಿದ್ದ ವ್ಯಕ್ತಿ ಗಾಯಗೊಂಡಿರುವ ಘಟನೆ ಆಡುಗೋಡಿ ಬಳಿಯ ಡೇರಿ ವೃತ್ತದಲ್ಲಿ ನಡೆದಿದೆ.

ನರಸಿಂಹ (65) ಸ್ಫೋಟಗೊಂಡು ಗಾಯಗೊಂಡವರು. ಕಾಲಿಗೆ ತೀವ್ರ ಗಾಯವಾಗಿರುವ ಪರಿಣಾಮ ಚಿಕಿತ್ಸೆಗೆ ದಾಖಲಿಸಲಾಗಿದೆ.

ಡೇರಿ ವೃತ್ತದ 9ನೇ ತಿರುವು ಬಳಿ ಇರುವ ಖಾಲಿ ನಿವೇಶನದಲ್ಲಿ ಕಸದ ರಾಶಿ ಇತ್ತು. ಚಂದ್ರಪ್ಪ ಲೇಔಟ್​ ನಿವಾಸಿ ನರಸಿಂಹ ಎಂಬುವವರು ಚಿಂದಿ ಸಂಗ್ರಹಿಸುತ್ತಿದ್ದರು. ಈ ವೇಳೆ ಅವರು ರಾಸಾಯನಿಕ ಇದ್ದ ಕ್ಯಾನ್​ ಮೇಲೆ ಕಾಲು ಇಟ್ಟಾಗ ಸ್ಫೋಟ ಸಂಭವಿಸಿದೆ. ಇದರಿಂದ ಅವರ ಕಾಲಿಗೆ ತೀವ್ರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

ಉದ್ದೇಶ ಪೂರ್ವಕ ಘಟನೆ ಅಲ್ಲ: ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್​ ಜೋಷಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಡೇರಿ ವೃತ್ತದ ಬಳಿ ಇರುವ ಗಣಪತಿ ದೇವಾಲಯದ ಖಾಲಿ ನಿವೇಶನದಲ್ಲಿ ರಾಸಾಯನಿಕ ಪತ್ತೆಯಾಗಿದೆ.

ಉದ್ದೇಶ ಪೂರ್ವಕವಾಗಿ ರಾಸಾಯನಿಕವನ್ನು ಅಲ್ಲಿ ಇಟ್ಟಿಲ್ಲ. ಮನೆ ನಿರ್ಮಾಣದ ವೇಳೆ ಬಳಸಿ ಉಳಿದ ರಾಸಾಯನಿಕವನ್ನು ಅಲ್ಲಿ ಬಿಸಾಡಿದ್ದರು. ಬಿಸಿಲಿನ ಹಿನ್ನೆಲೆಯಲ್ಲಿ ಅದು ಸ್ಫೋಟಗೊಂಡಿರಬಹುದು. ಸ್ಫೋಟಕ್ಕೆ ಕಾರಣವಾದ ರಾಸಾಯನಿಕ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ಶ್ರೀನಾಥ್​ ಜೋಷಿ ಹೇಳಿದರು.
ಸ್ಥಳಕ್ಕೆ ಎಫ್​ಎಸ್​ಎಲ್​ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net