ಮೂವರು ವಿದ್ಯಾರ್ಥಿಗಳ ದುರ್ಮರಣ

accident (3)
Published on

ಬೆಂಗಳೂರು: ಸರಕು ಸಾಗಣೆ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಯಲಹಂಕ ಸಮೀಪ ಜಿಕೆವಿಕೆ ಆವರಣದಲ್ಲಿ ಇರುವ ಬಾಗಲಕೋಟೆಯ ತೋಟಗಾರಿಕೆ ವಿವಿಯ ವಿದ್ಯಾರ್ಥಿಗಳಾದ ರೋಹಿತ್ (21), ಹರ್ಷವರ್ಧನ್ (22) ಹಾಗೂ ಸುಚಿತ್ (22) ಮೃತರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಮಂಗಳವಾರ ರಾತ್ರಿ 1 ಗಂಟೆಗೆ ಒಂದೇ ಬೈಕ್‌ನಲ್ಲಿ ಮೂವರು ವಿದ್ಯಾರ್ಥಿಗಳು ಜಾಲಿ ರೈಡ್‌ಗೆ ಹೋಗಿ ಹಾಸ್ಟೆಲ್‌ಗೆ ಮರಳುವಾಗ ಚಿಕ್ಕಜಾಲ ಸಮೀಪದ ಡ್ಯಾಶ್ ಸ್ಯ್ಕಾವರ್ ಮುಂದೆ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ತಪ್ಪಿಸಿಕೊಂಡಿದ್ದ ಲಾರಿ ಚಾಲಕನನ್ನು ಚಿಕ್ಕಜಾಲ ಸಂಚಾರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಕೆವಿಕೆ ಆವರಣದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿವಿಯ ಅಧ್ಯಯನ ಕೇಂದ್ರವಿದ್ದು, ಅಂತಿಮ ವರ್ಷದ ಬಿಎಸ್ಸಿಯಲ್ಲಿ ಹೆಬ್ಬಾಳದ ಸುಚಿತ್, ಚಿಕ್ಕಬಳ್ಳಾಪುರ ಜಿಲ್ಲೆಯ ರೋಹಿತ್ ಮತ್ತು ಕೋಲಾರ ಜಿಲ್ಲೆ ಶ್ರೀನಿವಾಪುರ ತಾಲೂಕಿನ ಹರ್ಷ ಓದುತ್ತಿದ್ದರು. ಹಾಸ್ಟೆಲ್‌ನಲ್ಲಿ ರೋಹಿತ್ ಮತ್ತು ಹರ್ಷ ನೆಲೆಸಿದ್ದರು. ಮಂಗಳವಾರ ರಾತ್ರಿ ಕೆಐಎ ರಸ್ತೆಯಲ್ಲಿ ಜಾಲಿ ರೈಡ್‌ಗೆ ಎರಡು ಬೈಕ್‌ಗಳಲ್ಲಿ ಐವರು ಸ್ನೇಹಿತರು ತೆರಳಿದ್ದರು. ಹರ್ಷ, ಸುಚಿತ್ ಮತ್ತು ರೋಹಿತ್ ತ್ರಿಬಲ್ ರೈಡಿಂಗ್‌ನಲ್ಲಿ ಹೋಗಿದ್ದರು. ಕೆಐಎಯಿಂದ ಈ ಸ್ನೇಹಿತರು ಮರಳುವಾಗ ಬೈಕ್‌ಗೆ ಚಿಕ್ಕಜಾಲದ ಡ್ಯಾಶ್ ಚೌಕದ ಮುಂದೆ ಕಲ್ಲು ಸಾಗಣೆ ಲಾರಿ ಡಿಕ್ಕಿಯಾಗಿದೆ.

ಗುದ್ದಿದ ರಭಸಕ್ಕೆ ವಿದ್ಯಾರ್ಥಿಗಳ ದೇಹಗಳು ಛಿದ್ರಛಿದ್ರವಾಗಿ ರಸ್ತೆಯಲ್ಲಿ ಬಿದ್ದಿತ್ತು. ಕೆಲ ಹೊತ್ತಿನ ಬಳಿಕ ಮತ್ತೊಂದು ಲಾರಿಯ ಚಾಲಕ, ಅಪಘಾತ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಸ್ಥಳಕ್ಕೆ ಬಂದ ಪೊಲೀಸರು, ರಸ್ತೆಯಲ್ಲಿ ಚೆಲ್ಲಾಪಿಲ್ಲಾಗಿಯಾಗಿ ಬಿದ್ದದ್ದ ಶವದ ಅಂಗಾಂಗಗಳನ್ನು ಆಯ್ದು ಮೂಟೆಗೆ ತುಂಬಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net