ಒಂದೇ ಸಿನಿಮಾದಲ್ಲಿ ಪವನ್ ಕಲ್ಯಾಣ್, ಅಟ್ಲಿ ಮತ್ತು ತ್ರಿವಿಕ್ರಮ್! ಯಾವ ಚಿತ್ರಕ್ಕೆ ಈ ಮೂವರ ಸಂಗಮ?

ವಿಜಯವಾಣಿ - 2024-01-20T200547.367
Published on

ಆಂಧ್ರಪ್ರದೇಶ: ಈ ವರ್ಷ ಪ್ರಾರಂಭವಾಗುತ್ತಿದ್ದಂತೆ ಟಾಲಿವುಡ್​ನ ಸ್ಟಾರ್​​ ನಟರ ಸಿನಿಮಾಗಳು ರಿಲೀಸ್ ಆಗಲು ಸಾಲು ಸಾಲಾಗಿ ನಿಂತಿದ್ದು, ಸಂಕ್ರಾಂತಿ ಹಬ್ಬದ ವಾರದಲ್ಲಿ ಉತ್ತಮ ಓಪನಿಂಗ್ ಪಡೆದುಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿವೆ. ಈ ಸಾಲಿನಲ್ಲಿ ಇನ್ನು ಅನೇಕ ನಟರ ಚಿತ್ರಗಳಿದ್ದು, ಬಿಡುಗಡೆಗೊಳ್ಳುವುದಷ್ಟೇ ಬಾಕಿ. ಇದೀಗ ಈ ಮಧ್ಯೆ ಹೊಸ ಸುದ್ದಿಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ನಿರ್ದೇಶಕ ಅಟ್ಲೀ, ಪವನ್ ಕಲ್ಯಾಣ್ ಮತ್ತು ತ್ರಿವಿಕ್ರಮ್ ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ತೆಲುಗು ಚಿತ್ರರಂಗದ ಪವರ್‌ಸ್ಟಾರ್ ಪವನ್ ಕಲ್ಯಾಣ್, ಬ್ಲಾಕ್‌ಬಸ್ಟರ್ 'ಜವಾನ್'​ ನಿರ್ದೇಶಕ ಅಟ್ಲಿ ಕುಮಾರ್​ ಮತ್ತು ಮಾತಿನ ಮಾಂತ್ರಿಕ ತ್ರಿವಿಕ್ರಮ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂವರ ಕಾಂಬಿನೇಷನ್​ ದೊಡ್ಡ ಮಟ್ಟದ ಹಿಟ್​ ಸಿನಿಮಾವನ್ನು ಕೊಡಲಿದೆ ಎಂಬ ಲೆಕ್ಕಾಚಾರಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

ಮುಖ್ಯಭೂಮಿಕೆಯಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದು, ಚಿತ್ರವನ್ನು ಅಟ್ಲೀ ನಿರ್ದೇಶನ ಮಾಡಲಿದ್ದಾರೆ. ಇವರಿಬ್ಬರ ಜೋಡಿಗೆ ಬಂಡವಾಳ ಹೂಡುವ ಮೂಲಕ ನಿರ್ಮಾಣದ ಜವಾಬ್ದಾರಿಯನ್ನು ತ್ರಿವಿಕ್ರಮ್ ವಹಿಸಲಿದ್ದಾರೆ ಎಂಬುದು ವದಂತಿ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಘೋಷಣೆಗಾಗಿ ನಿರೀಕ್ಷಿಸಬೇಕಿದೆ.

ಸದ್ಯಕ್ಕೆ ಪವನ್ ಕಲ್ಯಾಣ್ ತಮ್ಮ ರಾಜಕೀಯ ಕಾರ್ಯದಲ್ಲಿ ನಿರತರಾಗಿದ್ದು, ಪ್ರಸ್ತುತ ಅವರ ಕೈಯಲ್ಲಿ 'ಓಜಿ', 'ಉಸ್ತಾದ್ ಭಗತ್ ಸಿಂಗ್' ಮತ್ತು 'ಹರಿ ಹರ ವೀರ ಮಲ್ಲು' ಚಿತ್ರಗಳಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net