ಆರ್ಥಿಕವಾಗಿ ಸದೃಢವಾಗಿಸುವಲ್ಲಿ ಧರ್ಮಸ್ಥಳ ಯೋಜನೆ ಪ್ರಮುಖ ಪಾತ್ರ: ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ

19sor8
ಶಾಂತಪುರ ಮಠದಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣದಲ್ಲಿ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಡಾ. ಡಿ.ಜೆ.ಪಾಟೀಲ್, ಸುಬ್ರಾಯ ನಾಯ್ಕ, ಶೋಭಾ ಇತರರಿದ್ದರು.
Published on

ಸೊರಬ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಾತಿ, ಮತ, ಧರ್ಮ ಮೀರಿ ಎಲ್ಲರನ್ನೂ ಒಗ್ಗೂಡಿಸುವ ಜತೆಗೆ ಆರ್ಥಿಕವಾಗಿ ಸದೃಢರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಂತಪುರ ಸಂಸ್ಥಾನ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಶಾಂತಪುರ ಮಠದಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಜಡೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ, ಸಾಧನಾ ಸಮಾವೇಶದ ಸಾನ್ನಿಧ್ಯ ಆಶೀರ್ವಚನ ನೀಡಿದರು.
ಗ್ರಾಮೀಣ ಮಟ್ಟದ ಜನರು ಯೋಜನೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಜ್ಞಾನ ವೃದ್ಧಿಸಿಕೊಂಡು ಅಭಿವೃದ್ಧಿಯನ್ನು ಹೊಂದಬೇಕು. ಗ್ರಾಮೀಣ ಮಟ್ಟದ ಜನರ ಅಭಿವೃದ್ಧಿಗೆ ದಾರಿಯನ್ನು ಸೃಷ್ಟಿಸುವ ಮೂಲಕ ಧರ್ಮಸ್ಥಳದ ಹೆಗ್ಗಡೆ ದಂಪತಿ ಹಿಂದುಳಿದ ಜನರ ಬಾಳಿನ ದಾರಿದೀಪ ಆಗುತ್ತಿದ್ದಾರೆ ಎಂದರು.
ಶಕುನವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಡಿ.ಜೆ.ಪಾಟೀಲ್ ಮಾತನಾಡಿ, ಧರ್ಮಸ್ಥಳ ಯೋಜನೆ ಜನರನ್ನು ಸಂಘಟಿಸಿ ಆರ್ಥಿಕವಾಗಿ ಅಭಿವೃದ್ಧಿ ಮಾಡುವುದರ ಜತೆಗೆ ಜನರಲ್ಲಿ ವೈಯಕ್ತಿಕ ಸ್ವಚ್ಛತೆ, ಸುತ್ತಲಿನ ಪರಿಸರದ ಸ್ವಚ್ಛತೆ ಕುರಿತು ಉತ್ತಮ ಆರೋಗ್ಯದ ಅರಿವನ್ನು ಮೂಡಿಸುತ್ತಿದೆ. ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ, ಮದ್ಯಪಾನ ದುಶ್ಚಟಗಳ ನಿರ್ಮೂಲನೆಗೆ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ಎಲ್ಲರೂ ಕೈ ಜೋಡಿಸಬೇಕಿದೆ ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ಸುಬ್ರಾಯ ನಾಯ್ಕ ವಲಯದ 10 ಒಕ್ಕೂಟಗಳ ಪದಗ್ರಹಣ ನೆರವೇರಿಸಿ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಯೋಜನೆಯ ಜನಪರ ಕಾರ್ಯಕ್ರಮಗಳ ಬಗ್ಗೆಮಾಹಿತಿ ನೀಡಿದರು. ಗ್ರಾಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಶೋಭಾ ಮಂಜುನಾಥ, ಹೇಮಾವತಿ, ವಲಯ ಮೇಲ್ವಿಚಾರಕ ರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net