

ಗುಜರಾತ್: ಇತ್ತೀಚಿಗೆ ಗುಜರಾತ್‌ನ ವಡೋದರಾದಲ್ಲಿರುವ ಮೋಟ್ನಾಥ್ ಸರೋವರದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ 12 ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. 12 ಮೃತರ ಪೈಕಿ ಒಂದೇ ಫೋಟೋದಲ್ಲಿರುವ ಇಬ್ಬರು ಮಕ್ಕಳು ಒಂದೇ ಕುಟುಂಬಕ್ಕೆ ಸೇರಿದ್ದು, ಮಗುವನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರು ಕಂಗಲಾಗಿದ್ದಾರೆ.
ಇಬ್ಬರು ಮಕ್ಕಳಲ್ಲಿ ಒಬ್ಬ ಹೆಣ್ಣು ಮಗುವಿನ ಪೋಷಕರು ಮಾತನಾಡಿದ್ದು, ತಮ್ಮ ಮದುವೆಯಾಗಿ 17 ವರ್ಷ ಕಳೆದರೂ ಮಗು ಜನಿಸಿರಲಿಲ್ಲ. ದೇವರನ್ನು ನಿರಂತರವಾಗಿ ಪ್ರಾರ್ಥಿಸಿ ಪಡೆದ ಹೆಣ್ಣು ಮಗಳು ಇಂದು ಈ ದುರಂತದಲ್ಲಿ ಮೃತಪಟ್ಟು ನಮ್ಮನ್ನು ಅಗಲಿದ್ದಾಳೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಾಲಕಿಯ ಪಕ್ಕದಲ್ಲಿರುವ ಹುಡುಗ ಕೂಡ ಸಾವನ್ನಪ್ಪಿದ್ದು, ತಮ್ಮ ಸೋದರ ಸಂಬಂಧಿ ಪುತ್ರ ಎಂದು ತಿಳಿಸಿದ್ದಾರೆ.
ಘಟನೆಯ ವಿವರ: ಗುರುವಾರ (ಜ.18) ಗುಜರಾತ್‌ನ ವಡೋದರಾದಲ್ಲಿ ದೋಣಿ ಮಗುಚಿದ ಪರಿಣಾಮ 12 ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು. 12 ವಿದ್ಯಾರ್ಥಿಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಈ ಇಬ್ಬರು ಮಕ್ಕಳು ಕೂಡ ಸೇರಿದ್ದರು. ದೋಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು, ಅವರಲ್ಲಿ ಯಾರೂ ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ ಎಂದು ವರದಿಯಾಗಿದೆ.
ಘಟನೆಯ ಬೆನ್ನಲ್ಲೇ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಧೈರ್ಯ ಹೇಳಿದರು. ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಹಣವನ್ನು ಘೋಷಿಸಿದರು,(ಏಜೆನ್ಸೀಸ್).