

ಉತ್ತರಕನ್ನಡ: ದೀಪಾವಳಿ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ಆದರೆ ಶಿರಸಿಯ ಈ ಕುಟುಂಬದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಶಿರಸಿ ತಾಲೂಕಿನ ಮಾತ್ನಳ್ಳಿ (ಬಾಳಗಾರ)ನಲ್ಲಿ ನಡೆದಿದೆ.
ಉದಯ ಬಾಲಚಂದ್ರ ಹೆಗಡೆ (22) ಅನಾರೋಗ್ಯದಿಂದ ಸಾವು, ತಾಯಿ ನರ್ಮದಾ ಬಾಲಚಂದ್ರ ಹೆಗಡೆ(50), ದಿವ್ಯಾ(25) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಗಳು. ಮಗ ಅನಾರೋಗ್ಯದಿಂದ ಸಾವನ್ನಪ್ಪಿದ ದುಃಖಕ್ಕೆ ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉದಯ ಬಾಲಚಂದ್ರ ಹೆಗಡೆ ಅನಾರೋಗ್ಯದಿಂದ ಬಳಲುತ್ತಿದ್ದನು. ತಾಯಿ ನರ್ಮದಾ ಮತ್ತು ಮಗಳು ಆಸ್ಪತ್ರೆ, ಮನೆ ಅಂತ ಅಲೆದಾಡುತ್ತಿದ್ದರು. ಉದಯ ಇತ್ತೀಚಿಗೆ ಮನೆಯಲ್ಲಿದ್ದಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಉದಯ ಬಾಲಚಂದ್ರ ಹೆಗಡೆ ಸಹಜ ಸಾವನ್ನಪ್ಪಿದ್ದರು.
ತಾಯಿ ನರ್ಮದಾ ಮತ್ತು ಸಹೋದರಿ ದಿವ್ಯಾ ಕಣ್ಣೀರು ಹಾಕುತ್ತಾ ಉದಯ ಅವರ ಶವದ ಪಕ್ಕದಲ್ಲೇ ಕುಳಿತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಮನೆಯೊಳಗೆ ತೆರಳಿದ ನರ್ಮದಾ ಮತ್ತು ದಿವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.