

ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮತ್ತು ಇಬ್ಬರು ಮಕ್ಕಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನರ್ಸ್ಗಳು ಮತ್ತು ಡ್ಯೂಟಿ ಡಾಕ್ಟರನ್ನು ಕರ್ತವ್ಯ ಲೋಪದಡಿ ಸಸ್ಪೆಂಡ್ ಮಾಡಲಾಗಿದೆ ಎಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಬಳಿಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಹೆರಿಗೆ ನೋವಿನಿಂದ ಇದ್ದ ಮಹಿಳೆಗೆ ಚಿಕಿತ್ಸೆ ಕೊಡಿಸಲು ಇಬ್ಬರು ಸ್ಥಳೀಯರು ನ.02 ರಂದು ರಾತ್ರಿ 9-10 ಗಂಟೆ ವೇಳೆಗೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಕೆ ಬಂದಾಗ ದಾದಿಯರು ಒಳಗಡೆ ಕರೆದುಕೊಂಡು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ತಾಯಿ ಕಾರ್ಡ್,ಆಧಾರ್ ಕಾರ್ಡ್ ಕೇಳಿದ್ದಾರೆ. ಅದ್ಯಾವುದೂ ಆಕೆಯ ಬಳಿ ಇರಲಿಲ್ಲಾ. ಅಕ್ಕಪಕ್ಕದ ಮನೆಯರು ಒತ್ತಾಯ ಪೂರ್ವಕವಾಗಿ ಆಕೆಯನ್ನ ಕರೆದುಕೊಂಡು ಬಂದಿದ್ದಾರೆ. ಮೊದಲ ಹೆರಿಗೆ ನಾರ್ಮಲ್ ಆಗಿದೆ. ಇದು ಕೂಡ ಹಾಗೇ ಆಗುತ್ತದೆ ಎಂದು ದಾದಿಯರು ಅಂದುಕೊಂಡಿದ್ದಾರೆ.
ವಿಶೇಷ ಆರೈಕೆಯಲ್ಲಿ ಮಹಿಳೆಗೆ ತಕ್ಷಣ ಚಿಕಿತ್ಸೆ ಕೊಡಬಹುದಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ಹೆರಿಗೆ ವಾರ್ಡ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ನರ್ಸ್ಗಳ ಕರ್ತವ್ಯಲೋಪ ಎಸಗಿದ್ದಾರೆ. ಡ್ಯೂಟಿ ಡಾಕ್ಟರ್ ಇದ್ದರೂ ಚಿಕಿತ್ಸೆ ಕೊಡಲು ಮುಂದಾಗಿಲ್ಲ. ಎಲ್ಲರೂ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಈ ಘಟನೆಯಿಂದ ದಿಗ್ಭ್ರಮೆಗೊಳಗಾಗಿದ್ದೇನೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ನತದೃಷ್ಟ ಹೆಣ್ಣು ಮಗು ಇಂದು ನಿರ್ಗತಿಕಳಾಗಿದ್ದಾಳೆ. ಆಕೆಯನ್ನ ಕುಟುಂಬಸ್ಥರು ಪೋಷಿಸದಿದ್ದಲ್ಲಿ, ಜಿಲ್ಲಾಡಳಿತದಿಂದ 18 ರ್ಷದವರೆಗೂ ಉಚಿತ ಶಿಕ್ಷಣ,ವಸತಿ ಕಲ್ಪಿಸಲು ವ್ಯವಸ್ಥೆ ಮಾಡುತ್ತೇವೆ. ವೈಯಕ್ತಿಕವಾಗಿ ನಾನು ಆಕೆಯ ಅಕೌಂಟ್ನಲ್ಲಿ ಎಫ್‌ಡಿ ಮಾಡಲು ಇಚ್ಚಿಸಿದ್ದೇನೆ ಎಂದು ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.