ಬಿಟ್ ಕಾಯಿನ್ ಹಗರಣ, ಮೂಲಕ್ಕೆ ಗಾಳ: ಮೂರು ಗೇಮಿಂಗ್ ಕಂಪನಿಗಳ ಕಳ್ಳಾಟ ಬಯಲು

Bit Coin
Published on

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣದ ಮೂಲ ಪತ್ತೆಗೆ ಕೈ ಹಾಕಿರುವ ಜಾರಿ ನಿರ್ದೇಶನಾಲಯ (ಇಡಿ) ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಿಂದಿರುವ ಮೂರು ಗೇಮಿಂಗ್ ಕಂಪನಿಗಳ ಮಾಲೀಕರ ಬೆನ್ನತ್ತಿ ಶೋಧ ಆರಂಭಿಸಿದೆ.

ರಾಜ್ಯದಲ್ಲಿ ಬಿಟ್ ಕಾಯಿನ್​ನ ಮೂಲ ಪ್ರಕರಣ 2019ರ ಜು.9ರಂದು ಬೀದರ್​ನ ಗಾಂಧಿಗಂಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಲ್ಲಿನ ಪೊಲೀಸರು ನಡೆಸಿದ್ದ ತನಿಖೆಯಲ್ಲಿ ಗೇಮಿಂಗ್ ಕಂಪನಿಗಳು ಕೆಲ ಖಾಸಗಿ ವ್ಯಕ್ತಿಗಳ ವೈಯಕ್ತಿಕ ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಮಾಹಿತಿ ಸಿಕ್ಕಿದೆ. ಬೆಂಗಳೂರಿನ ಇಂದಿರಾ ನಗರದಲ್ಲಿರುವ ಭಾರತೀಯ ಮೂಲದ ಅಂತಾರಾಷ್ಟ್ರೀಯ ಮಾಲೀಕರ ಒಡೆತನದ 3 ಖಾಸಗಿ ಕಂಪನಿ ಮಾಲೀಕರು ಅಮಾಯಕರಿಗೆ ಹಣದ ಆಮಿಷವೊಡ್ಡಿ 120 ಖಾತೆಗಳಿಗೆ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬಹಿರಂಗ ವಾಗಿದೆ. ಬಿಟ್ ಕಾಯಿನ್​ಗೆ ಸಂಬಂಧಿಸಿದಂತೆ ಪ್ರತಿ ಖಾತೆಗಳಿಗೆ 4 ರಿಂದ 7 ಲಕ್ಷ ರೂ. ಹಾಕಿ ಬಳಿಕ ಅದನ್ನು ಹೈದರಾಬಾದ್​ನಲ್ಲಿ ವರ್ಗಾವಣೆ ಮಾಡಿಕೊಂಡಿದ್ದರು.

ಈ ಮೂರು ಕಂಪನಿಗಳ ಮಾಲೀಕರು ಶ್ರೀಕಿ ಬೆನ್ನ ಹಿಂದಿದ್ದಾರೆ ಎನ್ನಲಾಗಿದೆ. ಇವರ ಸಹಾಯದಿಂದಲೇ ಶ್ರೀಕಿ ಬಿಟ್ ಕಾಯಿನ್ ದಂಧೆ ನಡೆಸುತ್ತಿದ್ದ. ಇದೀಗ ತಲೆಮರೆಸಿಕೊಂಡಿರುವ ಗೇಮಿಂಗ್ ಕಂಪನಿಗಳ ಮಾಲೀಕರಿಗೆ ಇಡಿ ಬಲೆ ಬೀಸಿದೆ. ಅವರ ವಿಚಾರಣೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆ ಇದೆ.

120 ಖಾತೆ ತೆರೆದಿದ್ದ: ಡಿಬಿಎ ಇನ್​ಸ್ಪೆಕ್ಟರ್ ಬಿ. ಶರಣಬಸವೇಶ್ವರ, ಗಾಂಧಿ ಗಂಜ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೊಹಮ್ಮದ್ ಅಬ್ದುಲ್ ಫರ್ವೆಜ್ ಎಂಬಾತ ಹಲವು ಜನರ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್​ನಲ್ಲಿ ಉಳಿತಾಯ ಖಾತೆಗಳನ್ನು ತೆರೆದು ಅವರಿಗೆ ತಿಳಿಯದಂತೆ ಅವರ ಖಾತೆಗಳಿಂದಲೇ ಹಣದ ವಹಿವಾಟು ನಡೆಸುತ್ತಿದ್ದ. ಈ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸಲಾಗಿದೆ. ಆರೋಪಿ ಪರ್ವೆಜ್ ಮನೆ ಮೇಲೆ ದಾಳಿ ನಡೆಸಿದಾಗ ಆಕ್ಸಿಸ್ ಬ್ಯಾಂಕ್​ನ 120 ಖಾತೆದಾರರ ಖಾತಾ ಪುಸ್ತಕ, ಚೆಕ್ ಪುಸ್ತಕ, ಡೆಬಿಟ್, ಕ್ರೆಡಿಟ್ ಕಾರ್ಡ್, 12 ಆಧಾರ್ ಕಾರ್ಡ್ ದಾಖಲೆ ಜಪ್ತಿ ಮಾಡಲಾಗಿದೆ. ಹೈದರಾಬಾನ ಇಮ್ರಾನ್ ಶೇಖ್​ನೊಂದಿಗೆ ಸೇರಿ ತನಗೆ ಪರಿಚಯ ಇರುವ ಸಾರ್ವಜನಿಕರ ಹೆಸರಿನಲ್ಲಿ ಆಕ್ಸಿಸ್ ಬ್ಯಾಂಕ್​ಗಳಲ್ಲಿ ಖಾತೆಗಳನ್ನು ತೆರೆದು ಅವರಿಗೆ ತಿಳಿಯದಂತೆ ಹಣದ ವಹಿವಾಟು ನಡೆಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಪರ್ವೆಜ್ ತಿಳಿಸಿದ್ದ. ಇಮ್ರಾನ್ ಶೇಖ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, 2012ರಲ್ಲಿ ಸೈಯ್ಯದ್ ಅರ್ಸಂದ್ ಎಂಬಾತ ದುಬೈನಲ್ಲಿ ಪರಿಚಯವಾಗಿದ್ದ. 2018ರಲ್ಲಿ ಹೈದ್ರಾಬಾದ್​ನಲ್ಲಿ ಆತನನ್ನು ಭೇಟಿಯಾದಾಗ ಆನ್​ಲೈನ್ ಗೇಮ್ಲ್ಲಿ ಗೆದ್ದವರಿಗೆ ಹಣ ನೀಡಲು ಹಲವು ಬ್ಯಾಂಕ್ ಖಾತೆ ತೆರೆದು ನಾವು ಹೇಳಿದವರಿಗೆ ಹಣ ವರ್ಗಾವಣೆ ಮಾಡಿದರೆ ಕಮಿಷನ್ ಕೊಡುವುದಾಗಿ ಆಮಿಷವೊಡ್ಡಿದ್ದ. ಆಕ್ಸಿಸ್ ಬ್ಯಾಂಕ್​ನಲ್ಲಿ ತೆರೆದ ಖಾತೆಗಳಿಗೆ ಡೆಕ್ಕನ್ ಗೇಮ್್ಸ, ಶೋವಲೈನ್, ವೇಬಾ ಮುಂತಾದ ಕಂಪನಿ ಹೆಸರುಗಳ ಮೂಲಕ 120 ಖಾತೆಗಳಿಗೆ ಸೈಯದ್ ಅರ್ಸಂದ್ ಹಾಗೂ ಇತರರು ಹಣ ವರ್ಗಾವಣೆ ಮಾಡುತ್ತಿದ್ದರು. ಪ್ರತಿ ಬ್ಯಾಂಕ್ ಖಾತೆದಾರರಿಗೆ 500 ರೂ. ಕಮಿಷನ್ ನೀಡುತ್ತಿದ್ದರು ಎಂದು ತಿಳಿಸಿದ್ದಾನೆ. ಆದರೆ, ಇದರ ಹಿಂದೆ ಈ ಮೂರು ಗೇಮಿಂಗ್ ಕಂಪನಿ ಮಾಲೀಕರ ಪಾತ್ರ ಇರುವುದು ಇಡಿ ತನಿಖೆಯಲ್ಲಿ ಕಂಡು ಬಂದಿದೆ.

ತನಿಖೆ ನಿರ್ಲಕ್ಷ್ಯ: ಬೀದರ್​ನ ಗಾಂಧಿ ಗಂಜ ಪೊಲೀಸ್ ಠಾಣೆಯಲ್ಲಿ ದಾಖಲಾ ಗಿದ್ದ ಕೇಸ್​ನಲ್ಲಿ ಪೊಲೀಸರು ಹಣ ಜಪ್ತಿ ಮಾಡದೆ ಕೇಸ್​ನ ಅರ್ಧ ತನಿಖೆ ನಡೆಸಿ ಪ್ರಕರಣ ಕೈ ಬಿಟ್ಟಿದ್ದರು. ಬ್ಯಾಂಕ್ ಖಾತೆ ತೆರೆದ ವ್ಯಕ್ತಿ ಹಾಗೂ ಹಣ ಡ್ರಾ ಮಾಡಿದವನನ್ನು ಮಾತ್ರ ಬಂಧಿಸಿ ಅವರ ಹೇಳಿಕೆ ಪಡೆದಿದ್ದರು. 3 ಗೇಮಿಂಗ್ ಕಂಪನಿಗಳ ಮಾಲೀಕರ ಹೇಳಿಕೆಯನ್ನೂ ಪಡೆಯದೆ ನಿರ್ಲಕ್ಷಿಸಿದ್ದರು ಎಂದು ಹೇಳಲಾಗುತ್ತಿದೆ.

ಶ್ರೀಕಿ ಬಾಸ್​ಗಳಾರು?: ಶ್ರೀಕಿ ಬೆಂಗಳೂರು ಮೂಲದ ಇಬ್ಬರು ಸಾಫ್ಟ್​ವೇರ್ ಇಂಜಿನಿಯರ್​ಗಳ ನಿಯಂತ್ರಣದಲ್ಲಿದ್ದು, ಇವರೇ ಬಿಟ್ ಕಾಯಿನ್ ದಂಧೆಯ ಮಾಸ್ಟರ್ ಮೈಂಡ್​ಗಳೆಂದು ಹೇಳಲಾಗುತ್ತಿದೆ. ಅವರ ಮೂಲಕವೇ ರಾಜಕಾರಣಿಗಳ ಹಣ ಇದರಲ್ಲಿ ಹೂಡಿಕೆಯಾಗಿದೆ. ಹೀಗಾಗಿ ಕೇಸ್ ದೊಡ್ಡದಾದಷ್ಟೂ ಹಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ರಾಜ್ಯದ ಅನೇಕ ರಾಜಕಾರಣಿಗಳು, ಉದ್ಯಮಿಗಳ ಬ್ಲಾಕ್ ಮನಿ ಇವರ ಬಳಿ ಲಾಕ್ ಆಗಿದೆ ಎನ್ನಲಾಗಿದೆ. ಈ ಕಪ್ಪು ಹಣವನ್ನು ಬೆಂಗಳೂರು ಮೂಲದ ಕೆಲ ಬಿಟ್ ಕಾಯಿನ್ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿದೆ.

ಖಾಸಗಿ ಕ್ರಿಪ್ಟೋ ಕರೆನ್ಸಿ ಕಡಿವಾಣಕ್ಕೆ ಮಸೂದೆ

ನವದೆಹಲಿ: ದೇಶದಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ವಾರ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆಯಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್​ನಿಂದಲೇ (ಆರ್​ಬಿಐ) ಅಧಿಕೃತ ಡಿಜಿಟಲ್ ಕರೆನ್ಸಿ ಸೃಷ್ಟಿಸಲು ಮಸೂದೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಏನಿದ್ದರೂ ಕೆಲವು ಖಾಸಗಿ ಕ್ರಿಪ್ಟೋ ಕರೆನ್ಸಿಗಳಿಗಷ್ಟೇ ಅವಕಾಶ ದೊರೆಯಲಿದೆ.

ನ. 29ರಿಂದ ಡಿ.23ರ ವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಒಟ್ಟು 26 ಮಸೂದೆಗಳನ್ನು ಮಂಡಿಸಲಾಗುತ್ತದೆ. ಅವುಗಳಲ್ಲಿ ಕ್ರಿಪ್ಟೋಕರೆನ್ಸಿಗೆ ಕಡಿವಾಣ ಹಾಕುವ ಉದ್ದೇಶದ ಮಸೂದೆಯೂ ಸೇರಿದೆ. ಕರ್ನಾಟಕದಲ್ಲಿ, ಪ್ರಮುಖ ಕ್ರಿಪ್ಟೋಕರೆನ್ಸಿಗಳಲ್ಲಿ ಒಂದಾದ ಬಿಟ್​ಕಾಯಿನ್ ಹಗರಣ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಮಸೂದೆಗೆ ಮಹತ್ವ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net