

ಬೆಂಗಳೂರು: ಸರ್ಕಾರ, ಪಕ್ಷದ ವರ್ಚಸ್ಸು ವೃದ್ಧಿಗೆ ಪೂರಕ ನಿರ್ಧಾರ ಕೈಗೊಂಡರೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಅಪಸ್ವರದ ಮಧ್ಯೆ ಸಚಿವರಿಗೆ ವರಿಷ್ಠರು ‘ಕ್ಲಾಸ್’ ತೆಗೆದುಕೊಳ್ಳುವುದು ಫಿಕ್ಸ್ ಆಗಿದೆ. ನಂದಿ ಬೆಟ್ಟದ ಸಮೀಪದ ರೆಸಾರ್ಟ್ವೊಂದರಲ್ಲಿ ಜ.7ರಿಂದ 9ರವರೆಗೆ ‘ಚಿಂತನ ಬೈಠಕ್’ ನಡೆಯಲಿದ್ದು, ಸಚಿವರ ಎದೆಯಲ್ಲಿ ಡವಡವ ಶುರುವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷರು ಭಾಗಿಯಾಗಲಿದ್ದಾರೆ. ಕಾರ್ಯಕರ್ತರಿಗಾದರೆ ‘ಪ್ರಶಿಕ್ಷಣ ವರ್ಗ’, ರಾಜ್ಯ ನಾಯಕರು ಸೇರಿ ಸಚಿವರಿಗಾದರೆ ‘ಚಿಂತನ ಬೈಠಕ್’ ನಡೆಯಲಿದ್ದು, ಹಿಂದಿನ ನಡಿಗೆ ಅವಲೋಕಿಸಿ ಮುಂದಿನ ಪಥ ಗೊತ್ತುಮಾಡಲಾಗುತ್ತದೆ. ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯ ದರ್ಶಿಗಳು, ಸಚಿವರು ಒಳಗೊಂಡು 40 ಮುಖಂಡರಿಗೆ ಬೈಠಕ್ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮುಖಾಮುಖಿ ಚರ್ಚೆಯಾಗಲಿದೆ.
ಬೆಸೆಯದ ಕೊಂಡಿ: ‘ಜನಪ್ರಿಯತೆ’ ಹೆಚ್ಚಿಸಲೆಂದು ಮಹತ್ವದ ನಿರ್ಧಾರಗಳನ್ನು ಸಿಎಂ ಬೊಮ್ಮಾಯಿ ಕೈಗೊಂಡರೂ ಜನರಿಗೆ ಸರಿಯಾಗಿ ತಲುಪುತ್ತಿಲ್ಲ, ಪಕ್ಷದ ಪರ ವಾತಾವರಣವೂ ಸೃಷ್ಟಿಯಾಗುತ್ತಿಲ್ಲ ಎನ್ನುವುದು ವರಿಷ್ಠರ ಗಮನಕ್ಕಿದೆ. ಸಿಎಂ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳ ಮಧ್ಯೆ ಸಂಪರ್ಕ ಕೊಂಡಿ ಗಟ್ಟಿಯಾಗಿ ಬೆಸೆದಿಲ್ಲ, ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯದ ಕೊರತೆ ನಿವಾರಣೆಯಾಗಿಲ್ಲ ಎಂಬುದನ್ನು ಹಿರಿಯ ನಾಯಕರು ಬೊಟ್ಟು ಮಾಡಿ ತೋರಿಸಿದ್ದಾರೆ. ಆಡಳಿತಕ್ಕೆ ವೇಗ, ಅಭಿವೃದ್ಧಿ ಕೆಲಸಗಳ ಸಮರ್ಪಕ ಜಾರಿಯಲ್ಲಿನ ಹಿನ್ನಡೆಯು ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ತೊಡಕಾಗಿದ್ದು, ಈ ಪರಿಸ್ಥಿತಿಗೆ ಸಚಿವರೇ ಮೂಲ ಕಾರಣವೆಂಬ ಅಸಮಾಧಾನವು ದೆಹಲಿ ನಾಯಕರಿಗೆ ತಲುಪಿದೆ.
ಸಚಿವರಿಂದ ಶಾಸಕರ ನಿರ್ಲಕ್ಷ್ಯ ಆರೋಪ: ಸಚಿವರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಿಎಂ ಪ್ರಯತ್ನಿಸುತ್ತಿದ್ದಾರೆ. ಇದೇ ಮಾತು ಸಚಿವರು, ಶಾಸಕರಿಗೆ ಅನ್ವಯಿಸಲಾಗದು ಎಂದು ಪಕ್ಷದ ಮೂಲಗಳು ಬೇಸರ ವ್ಯಕ್ತಪಡಿಸಿವೆ. ಶಾಸಕರನ್ನು ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರ ಜತೆಗೆ ಶಾಸಕರ ಬಾಂಧವ್ಯ ಅಷ್ಟಕ್ಕಷ್ಟೇ ಎಂಬಂತಿದೆ. ಇವೆಲ್ಲವುಗಳ ಪರಿಣಾಮ ವಿಧಾನಪರಿಷತ್ ಹಾಗೂ ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೋಚರಿಸಿದ್ದು, ಸಂವಹನ ಮತ್ತು ಸಂಪರ್ಕವಿಲ್ಲದ ಸಂಘಟನೆ ಬಲವರ್ಧನೆ ಚಟುವಟಿಕೆಗಳು ಫಲ ನೀಡುವುದಿಲ್ಲವೆಂಬ ಎಚ್ಚರಿಕೆ ಸಂದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕಾರ್ಯಕ್ಷಮತೆ ಪರಾಮರ್ಶೆ: ಬೈಠಕ್ನಲ್ಲಿ ಪ್ರತಿಯೊಬ್ಬರ ಸಚಿವರ ಕಾರ್ಯಕ್ಷಮತೆ, ಇಲಾಖೆಯಲ್ಲಿ ತಂದ ಬದಲಾವಣೆ, ಹೊಸ ನೀತಿಗಳು, ಅಧಿಕಾರಿಗಳಿಂದ ಕೆಲಸ ತೆಗೆದುಕೊಂಡ ಪರಿ, ಜಿಲ್ಲಾ ಪ್ರವಾಸ, ಕ್ಷೇತ್ರ ಅಥವಾ ಜಿಲ್ಲೆಗೆ ಸೀಮಿತವಾಗಿದ್ದಾರೆಯೆ? ಎಂಬುದು ಪರಾಮರ್ಶೆಯಾಗಲಿದೆ. ಪಕ್ಷದ ವಿಚಾರಧಾರೆಗೆ ಬದ್ಧತೆ, ಪಾಲ್ಗೊಳ್ಳುವಿಕೆ, ಚಿಂತನೆಗಳನ್ನು ಜನರಿಗೆ ಮುಟ್ಟಿಸಲು ಶ್ರಮಿಸಿದ ರೀತಿಯು ಓರೆಗಲ್ಲಿಗೆ ಹಚ್ಚಿ, ಸ್ಪಷ್ಟ ದಿಕ್ಸೂಚಿ ಹಾಕಿಕೊಡಲಿದೆ. ಅಲ್ಲದೆ, ಪ್ರತಿಯೊಬ್ಬರ ಕಾರ್ಯದಕ್ಷತೆ ಆಧಾರದಲ್ಲಿ ಶ್ರೇಯಾಂಕಗಳನ್ನು ನೀಡಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಚುನಾವಣೆ ದೃಷ್ಟಿ: ಮುಂಬರುವ ಪ್ರತಿಷ್ಠಿತ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಮುನ್ನ ಸಚಿವರನ್ನು ಚುರುಕುಗೊಳಿಸುವುದು, ಹೊಣೆಗಾರಿಕೆ ನಿಗದಿ ಮಾಡುವುದು ಅತೀ ಮುಖ್ಯ ಎಂದು ಮನಗಂಡು ಸಭೆ ಕರೆಯಲಾಗಿದೆ ಎಂಬ ಮಾಹಿತಿಯೂ ಇದೆ. ಸ್ಥಳೀಯ ಸಂಸ್ಥೆ ಚುನಾವಣೆಗಳ ಗೆಲುವು 2023ರ ವಿಧಾನಸಭೆ ಚುನಾವಣೆ ತಯಾರಿ ಮೇಲೆ ಪರಿಣಾಮ ಬೀರುವ ಕಾರಣ ಪಕ್ಷವು ಸಾಕಷ್ಟು ನಿರೀಕ್ಷೆ ಹೊಂದಿದೆ.