

ನವದೆಹಲಿ: ಕಾಮಿಕ್ ಪುಸ್ತಕಗಳಲ್ಲಿ, ಸೈನ್ಸ್ ಫಿಕ್ಷನ್ ಚಿತ್ರಗಳಲ್ಲಷ್ಟೇ ಕಂಡು ಬರುತ್ತಿದ್ದ ಹಾರುವ ಕಾರು ಈಗ ವಾಸ್ತವವಾಗುತ್ತಿದೆ. ಆದರೆ, ಹೆಚ್ಚಿನವು ಡ್ರೋನ್ಗಳಂತೆ ರೆಕ್ಕೆ ಹೊಂದಿ ಅಥವಾ ಹೆಲಿಕಾಪ್ಟರ್ಗಳ ಸುಧಾರಿತ ರೂಪವಾಗಿಯೇ ಕಂಡು ಬರುತ್ತಿದ್ದವು. ಆದರೆ, ಇಸ್ರೇಲ್ ಕಂಪನಿಯೊಂದು ಅಭಿವೃದ್ಧಿಪಡಿಸುತ್ತಿರುವ ಈ ಕಾರು ಹಾರುವ ವಾಹನಗಳ ಕ್ಷೇತ್ರದಲ್ಲಿಯೇ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಲಿದೆ.
ಸಾಮಾನ್ಯ ಕಾರಿನ (ಎಸ್ಯುವಿ) ಗಾತ್ರದಷ್ಟೇ ಇದ್ದು, ಏಕಕಾಲದಲ್ಲಿ ಆರು ಜನರು ಪ್ರಯಾಣಿಸಬಹುದಾಗಿದೆ. ಇದನ್ನು ಫುಟ್ಪಾತ್ನಲ್ಲೂ ಇಳಿಸಬಹುದು. ಒಂದು ಹೆಲಿಕಾಪ್ಟರ್ ಇಳಿಯುವ ಜಾಗದಲ್ಲಿ ಇಂಥ ನಾಲ್ಕು ಕಾರುಗಳನ್ನು ಇಳಿಸಬಹುದು ಎಂಬುದು ಕಂಪನಿಯ ವಾದ.
ಇಸ್ರೇಲ್ನ ಅರ್ಬನ್ ಏರೋನಾಟಿಕ್ಸ್ ಕಂಪನಿ ಇದನ್ನು ತಯಾರಿಸುತ್ತಿದೆ. ಸಿಟಿಹಾಕ್ ಇವಿಟಿಒಎಲ್ ಎಂದು ಕರೆಯಲಾಗಿದೆ. ವಿಶೇಷವೆಂದರೆ ಇದಕ್ಕೆ ರೆಕ್ಕೆ ಅಥವಾ ರೋಟರ್ಗಳಿಲ್ಲ. ಜತೆಗೆ, ಇದು ಜಲಜನಕವನ್ನು ಇಂಧನವಾಗಿ ಉಪಯೋಗಿಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದು. ಮುಂದಿನ ದಿನಗಳಲ್ಲಿ ವಾಹನಗಳಿಗೆ ಜಲಜನಕವೇ ಮುಖ್ಯ ಇಂಧನ ಮೂಲವಾಗಲಿದೆ. ಇದನ್ನು ತುಂಬಿಸಿಕೊಳ್ಳಲು ಐದು ನಿಮಿಷ ಸಾಕು.
ಇದಕ್ಕೆ ಬಳಸಿರುವುದು ಇಂಟರ್ನಲ್ ರೋಟರ್ ಫ್ಯಾನ್ ಕ್ರಾಪ್ಟ್ ತಾಂತ್ರಿಕತೆ. ಇದು ವೈಮಾನಿಕ ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ ಎಂಬುದು ಕಂಪನಿಯ ವಾದ.
ಜತೆಗೆ, ಹೈಡ್ರೋಜನ್ ಇಂಧನ ಕಾರನ್ನು ಹಗುರವಾಗಿಸಿ ಹೆಚ್ಚು ಭಾರವನ್ನು ಕೊಂಡೊಯ್ಯುವಂತೆ ಮಾಡುತ್ತದೆ. ಕಂಪನಿ ಕಳೆದ ಒಂದು ದಶಕದಿಂದ ಇದರ ಅಭಿವೃದ್ಧಿಯಲ್ಲಿ ತೊಡಗಿದ್ದು, ಈಗ ಫಲ ನೀಡುತ್ತಿದೆ.
ಸಿಟಿ ಹಾಕ್ನ ವಿಡಿಯೋ ಇಲ್ಲಿದೆ....