

ಬೆಂಗಳೂರು: ತನ್ನ ಪ್ರಿಯಕರನ ಮನೆಯಲ್ಲಿದ್ದ 23 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಮಾಜಿ ಲವರ್ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈ ಟ್ರೈಂಗಲ್ ಲವ್ ಸ್ಟೋರಿ ಪ್ರಕರಣ ಸಂಬಂಧ ಪೊಲೀಸರು ಹಾಲಿ ಮತ್ತು ಮಾಜಿ ಪ್ರಿಯಕರರಿಬ್ಬರನ್ನೂ ಬಂಧಿಸಿದ್ದಾರೆ.
ಈ ಮೊದಲು ಬಬಿತ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಇವರಿಬ್ಬರ 4 ವರ್ಷದ ಪ್ರೀತಿ ಇತ್ತೀಚೆಗೆ ಬ್ರೇಕ್ ಅಪ್ ಆಗಿತ್ತು. ಕೆಲ ತಿಂಗಳ ಹಿಂದೆ ಆಕೆ ರಾಹುಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಬಬಿತ್ಗೂ ತಿಳಿದಿತ್ತು. ವಿಪರ್ಯಾಸವೆಂದರೆ ಈ ಮೂವರು ಒಂದೇ ಏರಿಯಾದ ನಿವಾಸಿಗಳು ಮತ್ತು ಸ್ನೇಹಿತರು ಕೂಡ.
ರಾಹುಲ್ ಬರ್ತ್ ಡೇಗೆ ವಿಶ್ ಮಾಡಲೆಂದು ಭಾನುವಾರ ಈತನ ಮನೆಗೆ ಯುವತಿ ಬಂದಿದ್ದಳು. ಅಷ್ಟರಲ್ಲಿ ಬಬಿತ್ನನ್ನೂ ಪ್ರೀತಿಸಿ ಕೈಕೊಟ್ಟಿರುವ ಬಗ್ಗೆ ತಿಳಿದ ರಾಹುಲ್ ಆಕೆಗೆ ಬುದ್ಧಿವಾದ ಹೇಳಿದ್ದಾನೆ. ಇದೇ ವೇಳೆ ಅಲ್ಲಿಗೆ ಎಂಟ್ರಿಕೊಟ್ಟ ಬಬಿತ್, ಯುವತಿಗೆ ಬೈದು ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಕಿರಿಕ್ ಪ್ರೇಯಸಿ ಮೇಲೆ ಕೈ ಮಾಡಿದ್ದು, ಎಲ್ಮೆಟ್ನಿಂದ ತಲೆಗೆ ಹೊಡೆದಿದ್ದಾನೆ. ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಿಯಕರಾದ ಬಬಿತ್ ಹಾಗೂ ರಾಹುಲ್ ಅವರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಯುವತಿ ನಿತ್ರಾಣಳಾಗಿ ಕೆಳಗೆ ಬಿದ್ದ ಕೂಡಲೇ ಆಕೆಯ ತಾಯಿಗೆ ಕರೆ ಮಾಡಿದ್ದ ಬಬಿತ್, ನಿಮ್ಮ ಮಗಳಿಗೆ ಅಪಘಾತವಾಗಿದ್ದು, ನಮ್ಮ ಮನೆಗೆ ಕರೆದುಕೊಂಡು ಬಂದಿದ್ದೇನೆ ಬನ್ನಿ ಎಂದಿದ್ದ. ಅಲ್ಲಿಗೆ ಬಂದ ಪಾಲಕರಿಗೆ ಇದು ಅಪಘಾತವಲ್ಲ, ಹಲ್ಲೆ ಎಂಬುದು ತಿಳಿದು ದೂರು ನೀಡಿದ್ದಾರೆ.