ಅಬ್ಬಬ್ಬಾ ಇದೆಂಥ ಮದ್ವೆ!; ಊಟಕ್ಕೆ ಕರೆಯೋ ಬದಲು ಮನೆಮನೆಗೂ ಊಟ ಕಳಿಸಿದ್ರು!

marriage
Published on

ಬೆಂಗಳೂರು: ಕೆಲಸ, ಸಂದರ್ಶನ, ಸಮಾರಂಭ, ನಿಶ್ಚಿತಾರ್ಥ, ಮದುವೆ.. ಹೀಗೆ ನಾನಾ ವಿಷಯಗಳಲ್ಲಿ ಇದಮಿತ್ತಂ ಎಂಬಂತಿದ್ದ ಸಂಪ್ರದಾಯಗಳನ್ನೆಲ್ಲ ತಲೆಕೆಳಗಾಗಿಸಿರುವ ಕರೊನಾ, 'ಹೀಗೂ ಸಾಧ್ಯನಾ?' ಎಂದು ಹುಬ್ಬೇರಿಸುವಂಥ ಹೊಸ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುವುದಷ್ಟೇ ಅಲ್ಲ, ಸಾಧ್ಯವಾಗಿಸಿಯೂ ತೋರಿಸಿದೆ. ಅಂಥದ್ದರಲ್ಲಿ ಈ ಮದುವೆ ಕೂಡ ಒಂದು.

ಸಾಮಾನ್ಯವಾಗಿ ಮದುವೆ ಎಂದರೆ ಬಂಧು-ಮಿತ್ರ ಬಳಗವನ್ನು ಒಂದೆಡೆಗೆ ಆಹ್ವಾನಿಸಿ, ಮದುವೆ ಊಟ ಹಾಕಿಸಿ ಕಳುಹಿಸುವುದು ಸಂಪ್ರದಾಯ. ಮದುವೆ ಎಂದರೆ ಊಟೋಪಚಾರ ಬಹುಮುಖ್ಯ. ಮದುವೆ ಸಮಾರಂಭದಲ್ಲಿ ಬೇರೆಲ್ಲ ಅದ್ದೂರಿ-ಆಡಂಬರಗಳು ಇರುತ್ತವೋ ಇಲ್ಲವೋ, ಒಂದೊಳ್ಳೆಯ ಊಟವಂತೂ ಇರಲೇಬೇಕು. ಆದರೆ ಇಲ್ಲೊಂದು ಕುಟುಂಬ ಮದುವೆಗೆ ಕರೆಯದೇ ಮದುವೆ ಊಟ ಹಾಕಿಸಿದೆ!

ಹೌದು.. ಹಿಂದೆಂದೂ ನಡೆಯದ ಇಂಥದ್ದೊಂದು ವಿಶೇಷ ಮದುವೆ ನಿನ್ನೆಯಷ್ಟೇ ನೆರವೇರಿದೆ. ವೆಬ್​ಕಾಸ್ಟ್​ನಲ್ಲಿ ಲೈವ್ ಆಗಿ ಈ ಮದುವೆ ನಡೆದಿದೆ. 'ಮದುವೆಯನ್ನೇನೋ ಲೈವ್ ಆಗಿ ತೋರಿಸಿರಬಹುದು, ಊಟ ಹೇಗೆ ಹಾಕಿಸಿರಬಹುದು?' ಎಂಬ ಪ್ರಶ್ನೆಗೆ ಉತ್ತರವೆಂಬಂತೆ ವಿಶಿಷ್ಟವಾದ ಪ್ರಯತ್ನವೊಂದನ್ನು ಈ ಫ್ಯಾಮಿಲಿ ಮಾಡಿದೆ. ಡಿಸೆಂಬರ್ 10ರಂದು ಈ ಮದುವೆ ನಡೆದಿದ್ದು, ಅದೇ ದಿನ ಆಹ್ವಾನಿತರಿಗೆಲ್ಲ ಮದುವೆ ಊಟವನ್ನು ಅವರವರ ಮನೆ ಬಾಗಿಲಿಗೇ ಕಳುಹಿಸಿಕೊಟ್ಟಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಮದುವೆ ಲೈವ್​ನ ಲಿಂಕ್ ಅಡ್ರೆಸ್​ ಮತ್ತು ಪಾಸ್​ವರ್ಡ್​ ಕೊಟ್ಟಿರುವ ಈ ಕುಟುಂಬ, ಮದುವೆ ದಿನ ನಿಮ್ಮ ಮನೆಬಾಗಿಲಿಗೆ ಔತಣ ಕಳುಹಿಸುತ್ತೇವೆ. ಅದನ್ನು ನೀವು ಸ್ವೀಕರಿಸಿ ಹರಿಸಿ ಎಂದು ಕೋರಿಕೊಂಡಿದ್ದಾರೆ.

ಕಾರ್ತಿಕ್​ ಹಾಗೂ ಶಕುಂತಳಾ ಎಂಬವರ ಪುತ್ರ ಶಿವಪ್ರಕಾಶ್​ ಮತ್ತು ಬಾಲಾ ಹಾಗೂ ರಾಮಸ್ವಾಮಿ ಎಂಬವರ ಪುತ್ರಿ ಮಹತಿ ಅವರ ವಿವಾಹ ಇಂಥದ್ದೊಂದು ಹೊಸ ಪ್ರಕಾರದ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿದೆ. ಬಾಳೆ ಎಲೆ, ಊಟದ ಬುತ್ತಿಗಳಿರುವ ಬುಟ್ಟಿ, ಮೆನು ಜತೆಗೆ ಯಾವ್ಯಾವ ಪದಾರ್ಥಗಳನ್ನು ಎಲೆ ಮೇಲೆ ಎಲ್ಲೆಲ್ಲಿ ಬಡಿಸಿಕೊಳ್ಳಬೇಕು ಎಂಬ ಮಾರ್ಗದರ್ಶನ ಇರುವ ಪತ್ರವೊಂದನ್ನು ಕೂಡ ಈ ಪಾರ್ಸೆಲ್​ನಲ್ಲಿ ಲಗತ್ತಿಸಲಾಗಿದೆ. ಒಟ್ಟಿನಲ್ಲಿ ಸಂಪ್ರದಾಯ, ಕರೊನಾ ಮಾರ್ಗಸೂಚಿ ಎರಡನ್ನೂ ಪಾಲಿಸುವ ನಿಟ್ಟಿನಲ್ಲಿ ವಿಶೇಷ ರೀತಿಯಲ್ಲಿ ಆಯೋಜಿಸಿರುವ ಈ ಮದುವೆ ಹಲವರ ಗಮನ ಸೆಳೆದಿದ್ದು, ಈ ಕುರಿತ ಫೋಟೋ-ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗಲಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net