ಡಾ.ವಿಷ್ಣುವರ್ಧನ್​ರ ಕಾಲರ್ ಹಿಡಿಯೋ ತಾಕತ್ ಯಾರಿಗಿದೆ? ಕರ್ನಾಟಕಕ್ಕೆ ಬಂದ್ರೆ ನಿಮ್ಮನ್ನ ಸುಮ್ನೆಬಿಡಲ್ಲ: ಅನಿರುದ್ಧ್ ಆಕ್ರೋಶ

vishnu-aniruddh
Published on

ಬೆಂಗಳೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್​ ಅಂದ್ರೆ ಅಭಿಮಾನಿಗಳ ಪಾಲಿಗೆ 'ಪ್ರೀತಿಯ ದಾದ'. ಕನ್ನಡದ ಮೇರುನಟ ವಿಷ್ಣುದಾದ ಶಾರೀರಿಕವಾಗಿ ಇಲ್ಲವಾದರೂ ಅವರ ಮೇಲಿನ ಪ್ರೀತಿ, ಅಭಿಮಾನ, ಗೌರವ ಕನ್ನಡಿಗರಲ್ಲಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಂತಹ ಹಿರಿಯ ನಟನ ಬಗ್ಗೆ ತೆಲುಗು ಸಿನಿಮಾ ಇಂಡಸ್ಟ್ರಿಯ ಖಳನಟನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಸ್ಯಾಂಡಲ್ವುಡ್​ನ ನಟರು, ವಿಷ್ಣು ಅಭಿಮಾನಿಗಳು ಮಾತ್ರವಲ್ಲ, ಡಾ.ವಿಷ್ಣು ಅವರ ಅಳಿಯ ಅನಿರುದ್ಧ್ ಕೂಡ ಆಕ್ರೋಶ ಹೊರಹಾಕಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ತೆಲುಗು ನಟ ವಿಜಯ್​ ರಂಗರಾಜು​ ಎಂಬಾತ, ವಿಷ್ಣುವರ್ಧನ್​ಗೆ ಲೇಡಿಸ್​ ವೀಕ್​ನೆಸ್​ ಇತ್ತು, ನಾನೊಮ್ಮೆ ಅವರ ಶರ್ಟ್​ನ ಕಾಲರ್​ ಹಿಡಿದಿದ್ದೆ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಈ ವಿವಾದಾತ್ಮಕ ಹೇಳಿಕೆ ವಾಪಸ್​ ಪಡೆದು, ಸಮಸ್ತ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿರುವ ವಿಷ್ಣುವರ್ಧನ್​ರ ಅಳಿಯ ಅನಿರುದ್ಧ್, 'ನಮ್ಮ ರಾಜ್ಯಕ್ಕೆ ನೀವೆಂದೂ ಬರಬೇಡಿ, ಬಂದ್ರೆ ಏನಾಗತ್ತೋ ಗೊತ್ತಿಲ್ಲ... ಎಂದು ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ವಿಷ್ಣುಗೆ ಅವಮಾನಿಸಿದ ವಿಜಯ್​ ರಂಗರಾಜು​ ವಿರುದ್ಧ ಆಕ್ರೋಶ ಹೊರಹಾಕುತ್ತ ಅನಿರುದ್ಧ್​ ಮಾತನಾಡಿದ್ದು, ಆ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಅಪ್ಲೌಡ್​ ಮಾಡಿಕೊಂಡಿದ್ದಾರೆ. ವಿಷ್ಣುದಾದ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡ ಪರಿ ಹೀಗಿದೆ.

'ನಮಸ್ಕಾರ ಎಲ್ಲರಿಗೂ.. ಅಪ್ಪಾವ್ರ ಬಗ್ಗೆ ವಿಜಯ್ ರಂಗರಾಜು ಅವರು ತುಂಬಾ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ನಿಜಕ್ಕೂ ತುಂಬಾ ಬೇಸರದ ವಿಷಯ. ಇದರಿಂದ ನಮ್ಮ ಎಲ್ಲ ಅಭಿಮಾನಿಗಳಿಗೆ ಬೇಸರವಾಗಿದೆ.. ಎಲ್ಲರಿಗೂ ಗೊತ್ತಿರುವಂತೆ ಅಪ್ಪಾವ್ರು ಎಲ್ಲ ಕಲಾವಿದರಿಗೆ, ತಂತ್ರಜ್ಞರಿಗೆ, ಪ್ರತಿಯೊಬ್ಬರಿಗೂ ಗೌರವ ಕೊಟ್ಟು ನಡೆದುಕೊಳ್ತಾ ಇದ್ರು. ಕಷ್ಟದಲ್ಲಿದ್ದ ಎಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ. ಸಹಾಯ ಮಾಡುವ ಸಮಯದಲ್ಲಿ ನಾನು ಸಹಾಯ ಮಾಡ್ದೆ ಅಂತ ಎಲ್ಲಿಯೂ ಹೇಳ್ಬೇಡಿ ಅಂತ ಹೇಳ್ತಾ ಇದ್ರು. ಅಂತ ವ್ಯಕ್ತಿ ಬಗ್ಗೆ ಆ ವ್ಯಕ್ತಿ ಹೀಗೆ ಮಾತನಾಡಿದ್ದು ನಿಜಕ್ಕೂ ಬೇಸರದ ವಿಷಯ. ಈವ್ಯಕ್ತಿ ಅಪ್ಪಾವ್ರ ಕಾಲರ್ ಹಿಡಿದೆ ಅಂತಾರೆ. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕಾಲರ್ ಹಿಡಿಯೋದ? ಸಿಂಹದ ಕಾಲರ್ ಹಿಡಿಯೋಕೆ ಯಾರಿಂದ ಸಾಧ್ಯ? ಆವ್ರಿಗೆ ಅಷ್ಟು ಧೈರ್ಯ ಇದ್ದಿದ್ರೆ ಅವರು ಈ ವಿಷಯನಾ ಆಗ್ಲೇ ಹೇಳಿಕೊಳ್ಳಬಹುದಿತ್ತು. ಅಪ್ಪಾವ್ರು ಶಾರೀರಿಕವಾಗಿ ನಮ್ಮನ್ನ ಬಿಟ್ಟು ಹನ್ನೊಂದು ವರ್ಷ ಆದಮೇಲೆ... ಅಲ್ಲೆಲ್ಲೋ ಕೂತ್ಕೊಂಡು ಇದನ್ನು ಹೇಳ್ತಿದ್ದಾರೆ ಅಂದ್ರೆ ಆ ವ್ಯಕ್ತಿಗೆ ಎಷ್ಟು ಧೈರ್ಯ ಇದೆ? ಸತ್ಯಕ್ಕೆ, ನಿಜಾಂಶಕ್ಕೆ ಧೈರ್ಯ ಇರತ್ತೆ, ಶಕ್ತಿ ಇರತ್ತೆ. ಅವಾಗ ಹೇಳಿಲ್ಲ ಅಂದ್ರೆ ಅದು ಸತ್ಯ ಅಲ್ಲ, ನಿಜಾಂಶ ಅಲ್ಲ. ಸುಮ್ನೆ ಮೀಸೆ ಬರ್ಸೋಕೊಂಡ್ರೆ ಶಕ್ತಿಶಾಲಿ ಅಲ್ಲ, ಧೈರ್ಯಶಾಲಿ ಅಲ್ಲ. ಅವ್ರು ಕರ್ನಾಟಕದ ಒಬ್ಬ ಮೇರು ನಟರ ಬಗ್ಗೆ ಮಾತನಾಡ್ತಿದ್ದಾರೆ.. ಅಪ್ಪಾವ್ರ ಬಗ್ಗೆ ಇವತ್ತು ಕೆಟ್ಟದಾಗಿ ಮಾತನಾಡಿದ್ರೆ ಅದು ಇಡೀ ಕರ್ನಾಟಕದ ಜನಗಳಿಗೆ ಅವಮಾನ ಮಾಡಿದ ಹಾಗೆ' ಎಂದು ಅನುರುದ್ಧ್ ಕಿಡಿಕಾರಿದ್ದಾರೆ.

'ಅಪ್ಪಾವ್ರ ಅಭಿಮಾನಿಗಳು ಸೇರಿದಂತೆ ಎಲ್ಲರ ಬಳಿಯೂ ಆ ವ್ಯಕ್ತಿ ಕ್ಷಮೆ ಕೇಳಬೇಕು. ಅಪ್ಪಾವ್ರಿಗೆ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಇತರ ಬೇರೆ ಬೇರೆ ರಾಜ್ಯಗಳು, ಭಾಷೆಗಳು ಎಂದು ಬೇಧ ಭಾವ ಇರಲಿಲ್ಲ. ಎಲ್ಲರನ್ನೂ ನಮ್ಮವರು ಅಂತ ಭಾವಿಸಿದ್ದರು. ಇವತ್ತು ಆ ವ್ಯಕ್ತಿ ಅಪ್ಪಾವ್ರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದು ನನಗೆ ತುಂಬಾನೆ ದುಃಖ ಆಗ್ತಿದೆ. ಇವತ್ತು ನಾನು ಒಬ್ಬ ಕುಟುಂಬದ ಸದಸ್ಯನಾಗಿ ತೆಲುಗು ಇಂಡಸ್ಟ್ರಿ ಅವರನ್ನ ಕೇಳ್ಕೋತೀನಿ, ದಯವಿಟ್ಟು ಆ ವ್ಯಕ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಆ ವ್ಯಕ್ತಿಗೂ ಕೇಳ್ಕೋತೀನಿ ದಯವಿಟ್ಟು ನೀವು ಇಲ್ಲಿಗೆ ಬರ್ಬೇಡಿ, ನೀವಿಲ್ಲಿ ಬಂದ್ರೆ ನಮ್ಮ ಸಿಂಹಗಳು-ಸಿಂಹಿಣಿಯರು(ವಿಷ್ಣು ಅಭಿಮಾನಿಗಳು) ನಿಮ್ಮನ್ನ ಏನ್ ಮಾಡ್ತಾರೋ ನನಗೆ ಗೊತ್ತಿಲ್ಲ' ಎಂದು ಎಚ್ಚರಿಸಿದ್ದಾರೆ.

'ಮತ್ತೊಮ್ಮೆ ನಾನು ತೆಲುಗು ಇಂಡಸ್ಟ್ರಿಯವರನ್ನ ಕೇಳ್ಕೋತೀನಿ ಆ ವ್ಯಕ್ತಿ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು. ನಾವೆಲ್ಲ ಭಾರತೀಯರು, ಒಂದೇ ಕುಟುಂಬದವರು. ಆದರೆ ಕೆಟ್ಟವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ. 'ಅಭಿಮಾನಿಗಳೇ, ಯಾರೋ ಏನೋ ಮಾತನಾಡಿದ್ರೂ ಅಂತ ಬೇಜಾರಗ್ಬೇಡಿ, ಆ ವ್ಯಕ್ತಿ ಯಾರು ಅಂತಾನೆ ಗೊತ್ತಿಲ್ಲ, ಆದ್ರೆ ಅಪ್ಪಾವ್ರ ಬಗ್ಗೆ ಮಾತನಾಡಿದ ಮೇಲೆ ಆ ವ್ಯಕ್ತಿ ಯಾರು ಅಂತ ತಿಳೀತು. ಸಾಮಾಜಿಕ ಜಾಲತಾಣದಲ್ಲಿ ಆ ವ್ಯಕ್ತಿಗೆ ಅಪ್ಪಾವ್ರ ಅಭಿಮಾನಿಗಳು ಚಪ್ಪಲಿಯ ಹಾರ ಹಾಕ್ತಾ ಇದ್ದಾರೆ. ಆ ವ್ಯಕ್ತಿಯ ಮಾತಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅಪ್ಪಾವ್ರು ಏನು ಎಂದು ಎಲ್ಲರಿಗೂ ಗೊತ್ತಿದೆ. ಅವರ ಸ್ಥಾನ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ ಎಂದ ಅನುರುಧ್​, ಎಲ್ಲ ಅಭಿಮಾನಿಗಳಿಗೆ ಕೋಟಿ ಕೋಟಿ ಧನ್ಯವಾದಗಳು' ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net