

ಚಿಕ್ಕಬಳ್ಳಾಪುರ: ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಇತ್ತೀಚೆಗೆ ‘‘ನನಗೆ ರಾತ್ರಿ ನಿದ್ದೆಯೇ ಬರುತ್ತಿಲ್ಲ’’ ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ಏನು ಕಾರಣ ಎಂಬುದನ್ನು ಅವರು ಅದರಲ್ಲೇ ಸೂಚ್ಯವಾಗಿ ಹೇಳಿದ್ದರು. ಅದೀಗ ನಿಜವಾಗಿದೆ!
ಸ್ಥಳೀಯ ಶಾಸಕರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುಧಾಕರ್ ಅವರಿಗೆ ಸಹಜವಾಗಿಯೇ ತಮ್ಮ ಕ್ಷೇತ್ರ, ಜಿಲ್ಲೆ ಬಗ್ಗೆ ಒಲವಿರುತ್ತದೆ. ಮುಂಬೈನಿಂದ ಸುಮಾರು 300 ಜನ ಆಗಮಿಸಿದ್ದು ಗೊತ್ತಾಗುತ್ತಲೇ ಅವರು ಆ ರೀತಿ ಟ್ವೀಟ್ ಮಾಡಿದ್ದರು. ಅವರ ಆತಂಕವೀಗ ಸತ್ಯವಾಗಿದೆ.
ಶುಕ್ರವಾರ ಪ್ರಕಟವಾದ ಹೆಲ್ತ್ ಬುಲೆಟಿನ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯವೇ 47 ಕರೊನಾ ಪಾಸಿಟಿವ್ ಪ್ರಕರಣಗಳಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿದೆ.
ಇದನ್ನೂ ಓದಿ ಹಿರಿಯ ಲೇಖಕಿ ಶಾಂತಾದೇವಿ ಕಣವಿ ಇನ್ನಿಲ್ಲ
ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದ ಸ್ಥಳೀಯ ವಲಸಿಗರಿಂದಲೇ ಈ ಭಾರೀ ಪ್ರಮಾಣದ ಕರೊನಾ ಸ್ಫೋಟ ಆಗಿರುವುದು ಖಚಿತವಾಗಿದೆ. ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆಯಿಂದ ಉದ್ಯೋಗಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ 265 ಕಾರ್ಮಿಕರು ಮೇ 19ರಂದು ವಾಪಸಾಗಿದ್ದರು. ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನು ಕ್ವಾರಂಟೈನ್‌ನಲ್ಲಿ ಇರಿಸಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು.
ಇನ್ನೂ 100ಕ್ಕೂ ಹೆಚ್ಚು ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ಮತ್ತೊಂದೆಡೆ 3ನೇ ಹಂತದಲ್ಲಿ ಮತ್ತಷ್ಟು ಕಾರ್ಮಿಕರು ಜಿಲ್ಲೆಗೆ ಆಗಮಿಸಲಿದ್ದು, ಇದರಲ್ಲಿ ಇನ್ನೆಷ್ಟು ಸೋಂಕಿತರು ಪತ್ತೆಯಾಗುತ್ತಾರೋ ಎಂಬ ಆತಂಕ ಶುರುವಾಗಿದೆ.