

ಧಾರವಾಡ: ಪ್ರಖ್ಯಾತ ಕವಿ ಚೆನ್ನವೀರ ಕಣವಿ ಅವರ ಪತ್ನಿ ಶಾಂತಾದೇವಿ ಕಣವಿ ಅವರು ಇಂದು ಸಂಜೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ನಾಳೆ ಧಾರವಾಡದಲ್ಲಿ ನಡೆಯಲಿದೆ. 1933ರಲ್ಲಿ ವಿಜಯಪುರದಲ್ಲಿ ಜನಿಸಿದ್ದ ಶಾಂತಾದೇವಿ ಅವರು ಅನೇಕ ಕಥೆ, ಲೇಖನಗಳನ್ನು ಬರೆದು ಸಾಹಿತ್ಯ ಲೋಕವನ್ನು ಸಿರಿವಂತಗೊಳಿಸಿದವರು.
ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ಅವರ ವೈಶಿಷ್ಟ್ಯವಾಗಿತ್ತು. ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ ಮುಂತಾದವು ಅವರ ಕಥಾಸಂಕಲನಗಳು. ಅಜಗಜಾಂತರ ಎಂಬ ಹರಟೆಗಳ ಸಂಗ್ರಹ, ನಿಜಗುಣ ಶಿವಯೋಗಿ ಎಂಬ ಮಕ್ಕಳ ಪುಸ್ತಕ ಪ್ರಕಟವಾಗಿದ್ದವು.
ಬಯಲು-ಆಲಯ ಕಥಾಸಂಕಲನಕ್ಕೆ 1974ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿತ್ತು. 1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರವೂ ಅವರಿಗೆ ಲಭಿಸಿತ್ತು. ಅವರ ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗೂ ಭಾಷಾಂತರಗೊಂಡಿವೆ.