More

    ರಾತ್ರೋರಾತ್ರಿ ಕಾರ್ಮಿಕರನ್ನು ಕರೆತಂದು ಅವ್ಯವಸ್ಥೆ ಕೂಪಕ್ಕೆ ದೂಡಿದ್ರು!

    ವಿಜಯಪುರ: ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ರಾಣಿ ಚನ್ನಮ್ಮ ವಸತಿ ನಿಲಯಯಕ್ಕೆ ಗುರುವಾರ ತಡರಾತ್ರಿ ಬಂದ ವಲಸೆ ಕಾರ್ಮಿಕರು ಅಲ್ಲಿನ ಅವ್ಯವಸ್ಥೆಗೆ ಅಕ್ಷರಶಃ ನಲುಗಿದ್ದಾರೆ. ಮಡಿಲಲ್ಲಿ ಪುಟ್ಟ ಮಕ್ಕಳನ್ನು ಹಿಡಿದ ಮಹಿಳೆಯರು ಊಟ-ನೀರಿಗಾಗಿ ಪರದಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು, ಪುರಷರು ಎನ್ನದೆ ಎಲ್ಲರೂ ಎಲ್ಲೆಂದರಲ್ಲಿ ಮಲಗುವ ದುಸ್ಥಿತಿ ಎದುರಾಗಿದ್ದು, ಶೌಚಕ್ಕೂ ಬಯಲನ್ನೇ ಆಶ್ರಯಿಸುತ್ತಿದ್ದಾರೆ.

    ಮಹಾರಾಷ್ಟ್ರದಿಂದ ಬಂದ ಹಿರೇಮಸಳಿ, ಸಂಗೋಗಿ, ಶಿರಶ್ಯಾಡ, ಗೂಗಿಹಾಳ ಮೂಲದ ಮೂವತ್ತಕ್ಕೂ ಹೆಚ್ಚು ವಲಸೆ ಕಾರ್ಮಿಕರು ಮಸಳಿ ವಸತಿ ನಿಲಯದ ಕ್ವಾರಂಟೈನ್​ನಲ್ಲಿದ್ದರು. ಅಧಿಕಾರಿಗಳು ಇವರನ್ನು ರಾತ್ರೋರಾತ್ರಿ ಚವಡಿಹಾಳ ಗ್ರಾಮದ ರಾಣಿ ಚನ್ನಮ್ಮ ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್​ ಕೇಂದ್ರಕ್ಕೆ ಸ್ಥಳಾಂತರಿಸಿದರು. ಆದರೆ, ಇಲ್ಲಿಗೆ ಕರೆತರುವ ಮುನ್ನ ಮೂಲಸೌಲಭ್ಯದ ವ್ಯವಸ್ಥೆಯನ್ನೂ ಮಾಡಿಲ್ಲ. ಕುಡಿವ ನೀರಿಗೂ ಕಾರ್ಮಿಕರು ಪರಿತಪಿಸಿದರು. ಇನ್ನು ನೀರು-ಆಹಾರ ಇಲ್ಲದೆ ಪುಟ್ಟ ಮಕ್ಕಳ ಆಕ್ರಂದನ ಮನಕಲಕುವಂತಿತ್ತು.

    ಇದನ್ನೂ ಓದಿರಿ ತೊಂಬತ್ತಕ್ಕೂ ಹೆಚ್ಚು ಜನರಿದ್ದ ಪಾಕಿಸ್ತಾನದ ವಿಮಾನ ಪತನ

    ಮಹಾರಾಷ್ಟ್ರದಿಂದ ಬಂದ ಜನರನ್ನು ಒಂದೆಡೆ ಕ್ವಾರಂಟೈನ್​ ಮಾಡಲು ನಿರ್ಧರಿಸಿದ ಅಧಿಕಾರಿಗಳು ಮಸಳಿ ಕ್ವಾರಂಟೈನ್​ ಕೇಂದ್ರದಲ್ಲಿದ್ದ ರಾತ್ರೋರಾತ್ರಿ ಕಾರ್ಮಿಕರನ್ನು ನಿದ್ರೆಯಿಂದ ಎಬ್ಬಿಸಿಕೊಂಡು ಸಾಮಾಜಿಕ ಅಂತರಕ್ಕೂ ಅವಕಾಶ ನೀಡದೆ ಒಂದೇ ಬಸ್​ನಲ್ಲಿ ಪುಟ್ಟ ಮಕ್ಕಳು ಸೇರಿ ಒಟ್ಟು 30ಕ್ಕೂ ಹೆಚ್ಚು ಜನರನ್ನು ಕರೆತಂದಿದ್ದಾರೆ. ರಾತ್ರಿ 2ಕ್ಕೆ ಚವಡಿಹಾಳಕ್ಕೆ ಬಿಟ್ಟು ಹೋದ ಅಧಿಕಾರಿಗಳು ಮರುದಿನ ಬೆಳಗ್ಗೆ 10 ಗಂಟೆಯಾದರೂ ಕಾರ್ಮಿಕರ ಬೇಕು ಬೇಡಗಳತ್ತ ಗಮನ ಹರಿಸಿರಲಿಲ್ಲ.

    30 ಕೊಠಡಿಗೆ 300 ಜನ: ಈ ವಸತಿ ಶಾಲೆಯಲ್ಲಿರುವುದು 30 ಕೊಠಡಿ. ಆದರೆ, 300ಕ್ಕೂ ಅಧಿಕ ಜನರನ್ನು ಕ್ವಾರಂಟೈನ್​ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲೂ ಸಾಮಾಜಿಕ ಅಂತರಕ್ಕೆ ಅವಕಾಶ ಇಲ್ಲದಂತೆ ಜನರನ್ನು ತುಂಬಲಾಗಿದೆ.

    ಇದನ್ನೂ ಓದಿರಿ ಮಂಡ್ಯ ಎಸ್ಪಿಗೂ ಕರೊನಾತಂಕ!

    “ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಸಮಸ್ಯೆ ಹೇಳಿಕೊಳ್ಳಲು ಹೋದ ನಮ್ಮನ್ನೇ ಗದರಿದರು. ‘ಮಹಾರಾಷ್ಟ್ರದಿಂದ ಬಂದವರನ್ನು ಹೀಗೆ ಪ್ರತ್ಯೇಕಿಸಲಾಗುತ್ತಿದೆ. ತೊಂದರೆಯಾಗುವುದು ಸಹಜ. ಎಲ್ಲವನ್ನೂ ಸಹಿಸಿಕೊಳ್ಳಬೇಕು’ ಎಂದರು. ಮಹಾರಾಷ್ಟ್ರದಿಂದ ಬಂದ ಮಾತ್ರಕ್ಕೆ ಎಲ್ಲರನ್ನೂ ಸೋಂಕಿತರಂತೆ ಭಾವಿಸಬಾರದು. ಕನಿಷ್ಠ ಸೌಜನ್ಯವಾದರೂ ನಮ್ಮ ಮೇಲೆ ತೋರಿ, ಸಮಸ್ಯೆ ಆಲಿಸಬೇಕು. ಕಾಲು ಚಾಚಲೂ ಜಾಗವಿಲ್ಲದಂತೆ ಕೊಠಡಿಯಲ್ಲಿ ಜನರನ್ನು ತುಂಬಿದ್ದಾರೆ” ಎಂದು ಕಾರ್ಮಿಕ ಆಕಾಶ ಗುನ್ನಾಪುರ ಅಳಲು ತೋಡಿಕೊಂಡರು.

    ಇನ್ನು ಮಧ್ಯಾಹ್ನ ಊಟಕ್ಕೆ ತಿಳಿ ಸಾರು ಮತ್ತು ಅರೆ ಬೆಂದ ಅನ್ನ ನೀಡಿದರು. ಆ ಊಟವನ್ನೂ ಸರಿಯಾಗಿ ಬಡಿಸಲ್ಲ. ಒಂದು ಕಡೆ ಊಟದ ಪಾತ್ರೆ ಇಟ್ಟು ಹೋಗುತ್ತಾರೆ. ಆ ಅರೆಬೆಂದ ಊಟಕ್ಕಾಗಿಯೇ ಕಾರ್ಮಿಕರು ಮುಗಿಬಿದ್ದು ತಟ್ಟೆಗೆ ಹಾಕಿಕೊಳ್ಳುತ್ತಾರೆ. ಒಟ್ಟಾರೆ ಮಾನವೀಯತೆ ಮರೆತವರಂತೆ ಅಧಿಕಾರಿಗಳು ನಮ್ಮನ್ನು ಕಾಣುತ್ತಿದ್ದಾರೆ ಎಂದು ಆಕಾಶ ಗುನ್ನಾಪುರ ಅಸಮಾಧಾನ ವ್ಯಕ್ತಪಡಿಸಿದರು.

    ಇದನ್ನೂ ಓದಿರಿ ಕ್ವಾರಂಟೈನ್​ನಲ್ಲಿ ಹೋಳಿಗೆಯೂಟ, ಮಾವಿನ ಸೀಕರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts