VIDEO: 107 ಜನರಿದ್ದ ಪಾಕಿಸ್ತಾನದ ವಿಮಾನ ಪತನ

Pak airlines 22 MAY 20
Published on

ಇಸ್ಲಾಮಾಬಾದ್​: ಪಾಕಿಸ್ತಾನ ಇಂಟರ್​ನ್ಯಾಷನಲ್ ಏರ್​ಲೈನ್ಸ್​ಗೆ ಸೇರಿದ ಪ್ರಯಾಣಿಕ ವಿಮಾನವೊಂದು ಶುಕ್ರವಾರ ಜಿನ್ಹಾ ಇಂಟರ್​ನ್ಯಾಷನಲ್ ಏರ್​ಪೋರ್ಟ್​ ಸಮೀಪ ಪತನವಾಗಿದೆ. ವಿಮಾನ ಲಾಹೋರ್​ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ವಿಮಾನದಲ್ಲಿ 107 ಪ್ರಯಾಣಿಕರಿದ್ದರು ಎಂಬ ಪ್ರಾಥಮಿಕ ಮಾಹಿತಿಯನ್ನು ಪಾಕ್ ಮಾಧ್ಯಮಗಳು ಬಿತ್ತರಿಸಿವೆ.

ಏರ್​ಬಸ್ ನಿರ್ಮಿತ ಎ320 ಮಾದರಿಯ ವಿಮಾನ ಇದಾಗಿದ್ದು, ಏರ್​ಪೋರ್ಟ್​ನಲ್ಲಿ ಇಳಿಯುವ ಮುನ್ನ ಪತನವಾಗಿದೆ. ವಿಮಾನದಲ್ಲಿ 99 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು ಎಂದು ಹೇಳಲಾಗುತ್ತಿದೆ. ವಿಮಾನ ಮಾಡೆಲ್ ಕಾಲನಿ ಸಮೀಪದ ವಸತಿ ಪ್ರದೇಶದಲ್ಲಿ ಪತನವಾಗಿದ್ದು ಸಾವು-ನೋವು, ನಾಶ ನಷ್ಟದ ಅಂದಾಜು ಇನ್ನಷ್ಟೇ ಲಭಿಸಬೇಕಾಗಿದೆ.

ವಿಮಾನ ಬಿದ್ದ ಕೂಡಲೇ ಸ್ಥಳದಲ್ಲಿ ಭೀಕರ ಸದ್ದು ಮತ್ತು ಧೂಳು ಎದ್ದಿದ್ದು, ಬಳಿಕ ಹೊಗೆ ಆವರಿಸಿಕೊಂಡಿದೆ. ಹೀಗಾಗಿ ವಿಮಾನದಲ್ಲಿದ್ದವರ ಸ್ಥಿತಿಗತಿ ಮತ್ತು ಪತನ ಸ್ಥಳದಲ್ಲಿ ಯಾರಾದರೂ ಇದ್ದಿದ್ದರೆ ಅವರ ಸ್ಥಿತಿಗತಿ ಏನು ಎಂಬುದು ಇನ್ನೂ ಗೊತ್ತಿಲ್ಲ. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net