

ಬೆಂಗಳೂರು: ಪಡಿತರ ವಿತರಣೆ, ಪಡಿತರ ಚೀಟಿ ಯಾವುದೇ ಸಮಸ್ಯೆ ಇರಲಿ ಗಮನಕ್ಕೆ ತಂದರೆ ಕೂಡಲೇ ಇತ್ಯರ್ಥಗೊಳಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರು ಶುಕ್ರವಾರ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಐಸಿಎಸ್ಇ ಮತ್ತು ಐಎಸ್ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಅವರು ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಓದುಗರ ಕರೆಗೆ ಸ್ಪಂದಿಸುತ್ತ ಮಾತನಾಡಿದರು. ರಾಜ್ಯದ ನಾನಾ ಭಾಗಗಳಿಂದ ಓದುಗರು ಕರೆಮಾಡುತ್ತಿದ್ದು ಬಹುತೇಕರು ಪಡಿತರ ಚೀಟಿ ಮತ್ತು ಪಡಿತರ ವ್ಯವಸ್ಥೆಯ ಲೋಪದೋಷಗಳ ಬಗ್ಗೆ ಸಚಿವರ ಗಮನ ಸೆಳೆದರು.
ದೊಡ್ಡಬಳ್ಳಾಪುರದ ಚಂದ್ರಶೇಖರ್ ಎಂಬುವವರು ಕರೆ ಮಾಡಿ, ಎರಡು ವರ್ಷಗಳ ಹಿಂದೆ ಪಡಿತರ ಚೀಟಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಪಡಿತರ ಚೀಟಿ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಅವರ ಫೋನ್ ನಂಬರ್ ತೆಗೆದುಕೊಂಡು ಅಧಿಕಾರಿಗಳಿಗೆ ನೀಡಿ ಸಮಸ್ಯೆ ಬಗೆ ಹರಿಸುವಂತೆ ಸೂಚಿಸಿದರು. ಅಲ್ಲದೆ, ಸರ್ಕಾರ ಘೋಷಿಸಿದಂತೆ ಮುಂಗಡವಾಗಿಯೇ ಚಂದ್ರಶೇಖರ್ ಅವರಿಗೆ ಸಿಗಬೇಕಾಗಿರುವ ಪಡಿತರ ಎಷ್ಟೆಂದು ನೋಡಿ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಪಡಿತರ ಚೀಟಿ ಒದಗಿಸುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಗೋಪಾಲಯ್ಯ ಅವರು ಭರವಸೆ ನೀಡಿದರು.