

ಮಂಡ್ಯ: ಕೆ.ಆರ್.ಪೇಟೆಯಲ್ಲಿ ಪೇದೆಯೊಬ್ಬರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗೆ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ ಸೂಚಿಸಿದ್ದಾರೆ. ಸ್ವತಃ ಎಸ್ಪಿ ಅವರೇ ಶುಕ್ರವಾರ ಬೆಳಗ್ಗೆ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಗಾದರು.
ಜಿಲ್ಲೆಯಲ್ಲಿ ಗುರುವಾರ ಸರ್ಕಾರಿ ಅಧಿಕಾರಿ, ಪೇದೆಗೆ ಸೋಂಕು ದೃಢಪಟ್ಟಿತ್ತು. ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣವೂ ಹೆಚ್ಚುತ್ತಿದ್ದು, ಆತಂಕ ಸೃಷ್ಟಿಸುತ್ತಿದೆ. ಈ ನಡುವೆ ಮದ್ದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್ಪಿ ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿ ಬರಬೇಕಿದೆ. ಕರ್ತವ್ಯನಿರತ ಎಲ್ಲ ಪೊಲೀಸ್ ಸಿಬ್ಬಂದಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಎಸ್ಪಿ ಹೇಳಿದ್ದಾರೆ.