ವಿನಾಶಕಾಲೇ ವಿಪರೀತ ಬುದ್ಧಿ: ರಾಜ್ಯ ಸರ್ಕಾರದ ವಿರುದ್ಧ ಆರ್​. ಅಶೋಕ ಕೆಂಡಾಮಂಡಲ

ವಿಜಯವಾಣಿ - 2024-09-14T111508.013
Published on

ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳಿಸಬೇಕು ಎಂದು ಬೆಂಗಳೂರಿನ ಟೌನ್ ಹಾಲ್ ಮುಂದೆ ನಿನ್ನೆ (ಸೆ.13) ಗಣಪತಿ ಮೂರ್ತಿಯನ್ನು ಹೊತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ ಹಲವು ಹಿಂದೂ ಸಂಘಟನೆಗಳು, ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ವೇಳೆ ಹಿಂದೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು, ಗಣಪನನ್ನು ಬಂಧಿಸಿ, ವ್ಯಾನ್​ನೊಳಗೆ ಕೂರಿಸಿದರು. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಯಿತು. ಸದ್ಯ ಈ ವಿಷಯವನ್ನು ಖಂಡಿಸಿ ಮಾತನಾಡಿರುವ ವಿಪಕ್ಷ ನಾಯಕ ಆರ್​. ಅಶೋಕ, ವಿನಾಶಕಾಲೇ ವಿಪರೀತ ಬುದ್ಧಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

"ಕಡುಬು, ಮೋದಕ ಇಟ್ಟು ನೈವೇದ್ಯ ಮಾಡಬೇಕಾದ ಕೈಗಳಿಗೆ ಸಂಕೋಲೆ ತೊಡಿಸಿದೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ. ಭಕ್ತರ ಜಯಘೋಷ, ಮಂಗಳ ವಾದ್ಯಗಳ ಮಧ್ಯೆ ಭವ್ಯವಾದ ಮೆರವಣಿಗೆಯಲ್ಲಿ ಸಾಗಬೇಕಾದ ಗಣೇಶನನ್ನ ಪೊಲೀಸ್ ವ್ಯಾನ್ ಹತ್ತಿಸಿದೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ" ಎಂದು ಆಕ್ರೋಶ ಹೊರಹಾಕಿದ್ದಾರೆ.

"ದೀಪ ಆರುವುದಕ್ಕೂ ಮುಂಚೆ ಜೋರಾಗಿ ಉರಿಯುತ್ತದೆ ಎಂಬ ಮಾತಿದೆ. ಹಾಗೆಯೇ ಈ ಧರ್ಮದ್ರೋಹಿ ಕಾಂಗ್ರೆಸ್​ ಸರ್ಕಾರ ಸರ್ವನಾಶವಾಗುವ ದಿನ ದೂರವಿಲ್ಲ ಎಂಬ ಎಲ್ಲ ಲಕ್ಷಣಗಳೂ ಸುಸ್ಪಷ್ಟವಾಗಿ ಗೋಚರಿಸುತ್ತಿವೆ" ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆರ್​. ಅಶೋಕ ಗರಂ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net