ಭೂ ಕುಸಿತವು ಪ್ರಕೃತಿ ವಿಕೋಪವಲ್ಲ, ಐ.ಆರ್.ಬಿ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದ: ಸಿಎಂ

ವಿಜಯವಾಣಿ (86)
Published on

ಉತ್ತರ ಕನ್ನಡ: ಇಂದು ಶಿರೂರಿನಲ್ಲಿ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಖದ್ದಾಗಿ ತಾವೇ ಸ್ಥಳವನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಸಲಹೆ ನೀಡಿದರು. ಇನ್ನು ತಮ್ಮ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಎಸ್​ಡಿಆರ್​ಎಫ್ ನಿಂದ 46 ಜನ, ಎನ್​ಡಿಆರ್​ಎಪ್​ನಿಂದ 24 ಜನ ಹಾಗೂ 44 ಜನ ಮಿಲಿಟರಿಯವರು ಹಾಗೂ ನೌಕಾಪಡೆಯವರೂ ಕೂಡ ಕೈಜೋಡಿಸಿದ್ದಾರೆ ಎಂದು ಹೇಳಿದರು.

"ಗೋವಾ ಮತ್ತು ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಭೂ ಕುಸಿತ ಉಂಟಾಗಿದೆ. ಭೂ ಕುಸಿತದಿಂದ 10 ಜನ ಕಾಣೆಯಾಗಿದ್ದಾರೆ. ಅದರಲ್ಲಿ ಏಳು ಜನರ ಮೃತದೇಹಗಳು ಪತ್ತೆಯಾಗಿದ್ದು ಇನ್ನೂ ಮೂವರ ಪತ್ತೆಗಾಗಿ ಕಾರ್ಯಾಚರಣೆ ಜಾರಿಯಲ್ಲಿದೆ. ನೌಕಾದಳ ಹಾಗೂ ರಕ್ಷಣಾ ತಂಡದವರಿಗೆ ಎಲ್ಲೆಡೆ ಹುಡುಕುವಂತೆ ಸೂಚನೆ ನೀಡಲಾಗಿದೆ. 10 ಜನರು ಕಾಣೆಯಾಗಿದ್ದಾರೆ. ಘಟನೆ ನಡೆದ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನು ಹಾಗೂ ಶಾಸಕರನ್ನು ಸ್ಥಳಕ್ಕೆ ಕಳುಹಿಸಲಾಗಿದೆ" ಎಂದರು.

"ಇಲ್ಲಿನ ಭೂ ಕುಸಿತವು ಪ್ರಕೃತಿ ವಿಕೋಪವಲ್ಲ, ಐ.ಆರ್.ಬಿ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಂಭವಿಸಿದೆ. ಯಾರೇ ತಪ್ಪು ಮಾಡಿದರೂ ಕೂಡ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ನಿರ್ಮಾಣ ಮಾಡಿರುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು. ಪರಿಹಾರ ಕಾಮಗಾರಿ ಮುಗಿದ ಮೇಲೆ ಪ್ರಕರಣದ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

"ಕೇಂದ್ರ ಸರ್ಕಾರ ರಸ್ತೆ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದ್ದು, ಕೇಂದ್ರ ರಸ್ತೆ ಸಾರಿಗೆ ಸಚಿವರೊಂದಿಗೆ ಮಾತನಾಡುತ್ತೇನೆ. ಕಳಪೆ ಕೆಲಸವಾಗಿದ್ದರೆ ಅದನ್ನು ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಲಾಗುವುದು" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net