

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಹಿರಿಯರ ಸದನ, ಚಿಂತಕರ ಚಾವಡಿ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ಗೆ ಇಷ್ಟು ವರ್ಷ ಇದ್ದ ಘನತೆ ಆಡಳಿತ, ಪ್ರತಿಪಕ್ಷಗಳ ಅಧಿಕಾರಲಾಲಸೆಯಿಂದ ಪ್ರಪಾತಕ್ಕೆ ಬಿದ್ದಿದೆ. ಮೇಲ್ಮನೆ ಸದಸ್ಯರೆನಿಸಿಕೊಂಡವರ ದುಂಡಾ ವರ್ತನೆಯಿಂದ ರಾಜ್ಯದ ಶಾಸ ಕಾಂಗ ವ್ಯವಸ್ಥೆ ರಾಷ್ಟ್ರ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ. ಪರಿಷತ್ನಲ್ಲಿ ಮೂರು ಪಕ್ಷಗಳ ಸದಸ್ಯರು ನಡೆದುಕೊಂಡಿದ್ದನ್ನು ಗಮನಿಸಿ ದರೆ ಇತ್ತೀಚಿನ ಚುನಾವಣಾ ಪದ್ಧತಿ, ಸದನದ ನಡವಳಿಕೆಗಳ ಬಗ್ಗೆ ರಾಜಕೀಯ ಪಕ್ಷಗಳ ಆತ್ಮಾವಲೋಕನಕ್ಕಿದು ಸಕಾಲ ಎಂಬ ಭಾವನೆ ಮೂಡುತ್ತದೆ. ಪರಿಷತ್ ಘಟನೆಯಲ್ಲಿ ಯಾರದ್ದು ತಪು್ಪ, ಯಾರದ್ದು ಸರಿ? ಎಂಬುದಕ್ಕಿಂತ ಈ ತಪ್ಪಿನಲ್ಲಿ ಎಲ್ಲರೂ ಸಮಾನ ಭಾಗಿಗಳೇ. ಈ ವಿಚಾರ ಎಲ್ಲ ಪಕ್ಷದೊಳಗೂ ಚರ್ಚೆಯಾಗಬೇಕಿದೆ.
ಎರಡನೇ ಅವಿಶ್ವಾಸ: ಪರಿಷತ್ ಇತಿಹಾಸದಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ತಂದಿರುವುದು ಇದು ಎರಡನೇ ಬಾರಿ. 2017ರಲ್ಲಿ ಡಿ.ಎಚ್. ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ತಂದಿತ್ತು. ಆಗ ಶಂಕರಮೂರ್ತಿ ಜೆಡಿಎಸ್ ಬೆಂಬಲದೊಂದಿಗೆ ಸದನದ ವಿಶ್ವಾಸ ಗಳಿಸಿದ್ದರು. ಈಗ ಸಭಾಪತಿ ಕೆ. ಪ್ರತಾಪಚಂದ್ರಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ತಂದಿದೆ. ಅದನ್ನು ಅವರು ಕಾನೂನು ಪ್ರಕಾರ ಇಲ್ಲವೆಂದು ತಿರಸ್ಕರಿಸಿರುವುದಾಗಿ ಹೇಳಿದ್ದಾರೆ.
ಗಲಾಟೆಗೆ ಕಾರಣವೇನು?: ಇಡೀ ಪ್ರಕರಣವನ್ನು ಸುಲಭವಾಗಿ ಬಗೆ ಹರಿಸಿಕೊಳ್ಳಲು ಇದ್ದ ಅವಕಾಶ ಪ್ರತಿಷ್ಠೆಯಿಂದಾಗಿ ಹಾಳಾಗಿ ಮೂರು ಪಕ್ಷಗಳ ಸದಸ್ಯರ ವರ್ತನೆಗೆ ಜನತೆ ಅಪಹಾಸ್ಯ ಮಾಡುವಂತಾಯಿತು.
ಘನತೆ ತಂದವರಿವರು: ಪರಿಷತ್ಗೆ ತನ್ನದೇ ಆದ ಘನತೆ ಮೂಡುವುದಕ್ಕೆ ಸಾಕಷ್ಟು ಜನರ ಕೊಡುಗೆ ಇದೆ. ವಿಧಾನಸಭೆ , ಸ್ಥಳೀಯ ಸಂಸ್ಥೆ, ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾದವರು, ನಾಮ ನಿರ್ದೇಶನಗೊಂಡವರು ಅರ್ಥಗರ್ಭಿತ ಚರ್ಚೆಗಳ ಮೂಲಕ ಕೀರ್ತಿಯನ್ನು ಹೆಚ್ಚಿಸಿದ್ದರು. ವಿವಿಧ ರಾಜಕೀಯ ಪಕ್ಷಗಳಿಂದಲೇ ಬಂದ ಅಬ್ದುಲ್ ನಜೀರ್ ಸಾಬ್, ಡಾ. ವಿ.ಎಸ್. ಆಚಾರ್ಯ, ಅಪ್ಪಣ್ಣ ಹೆಗಡೆ, ಅಣ್ಣ ವಿನಯಚಂದ್ರ, ಬನುಮಯ್ಯ, ಎಚ್.ಸಿ. ಬೋರಯ್ಯ, ಕೆ.ಸಿ. ರೆಡ್ಡಿ, ಚನ್ನಯ್ಯ ಓಡೆಯರ್, ಎಲ್.ಜಿ ಹಾವನೂರ್, ಕರುಂಬಳ್ಳಿ ಸಂಜೀವಶೆಟ್ಟಿ, ಬಿ.ಬಿ. ಶಿವಪ್ಪ, ಎನ್. ರಾಚಯ್ಯ, ಪ್ರೊ. ಲಕ್ಷ್ಮೀಸಾಗರ್, ರಾಮಕೃಷ್ಣ ಹೆಗಡೆ, ಎಂ.ಪಿ. ಪ್ರಕಾಶ್, ಏಜಾಸುದ್ದೀನ್, ಎಂ.ಆರ್. ತಂಗಾ, ಎಂ.ಸಿ. ನಾಣಯ್ಯ ಸೇರಿದಂತೆ ನೂರಾರು ಜನ ಸದನದಲ್ಲಿ ಯಾವುದೇ ಅಧಿಕಾರದ ಆಸೆ ಇಲ್ಲದೆ, ಆಯ್ಕೆಯಾದ ಪಕ್ಷದ ಬಗ್ಗೆಯೂ ಚರ್ಚೆ ನಡೆಸದೆ, ಕೇವಲ ನಾಡಿನ ಜನರ ಸಮಸ್ಯೆಗಳನ್ನು ಅನಾವರಣ ಮಾಡುವ ಮೂಲಕ ಮೇಲ್ಮನೆಯ ಕೀರ್ತಿ ಹೆಚ್ಚಿಸಿದ್ದರು.
ಸಾಹಿತಿ ಬಸವರಾಜ ಕಟ್ಟೀಮನಿ, ಕಲಾವಿದ ರುಮಾಲೆ ಚನ್ನಬಸವಯ್ಯ, ಡಿ.ವಿ. ಗುಂಡಪ್ಪ, ಗಂಗೂಬಾಯಿ ಹಾನಗಲ್, ಖಾದ್ರಿ ಶಾಮಣ್ಣ, ಮಲ್ಲಿಕಾರ್ಜುನ ಮನ್ಸೂರ್, ಡಾ. ಎಂ.ಸಿ. ಮೋದಿ, ಮಹದೇವ ಬಣಕಾರ್, ಎಚ್.ಎಲ್. ನಾಗೇಗೌಡ, ಡಾ. ಎಚ್. ನರಸಿಂಹಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ವಿದ್ಯಾಧರ ಗುರೂಜಿ, ಡಾ. ವಿಜಯ ಸಂಕೇಶ್ವರ, ಚಂದ್ರಶೇಖರ ಕಂಬಾರ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ನಾಮನಿರ್ದೇಶನಗೊಂಡು ವಿಧಾನ ಪರಿಷತ್ಗೆ ಗೌರವ ತಂದುಕೊಟ್ಟಿದ್ದರು.ಇಂತಹ ಮುಖಂಡರ ಮಾತುಗಳಿಗೆ ಇಡೀ ನಾಡು ಕಾದು ಕುಳಿತಿರುತ್ತಿತ್ತು. ಅಂತಹ ಮೌಲ್ಯಯುತ ಚರ್ಚೆ ಮೇಲ್ಮನೆಯಲ್ಲಿ ನಡೆಯುತ್ತಿತ್ತು.
ಪರಿಷತ್ನ ಸದಸ್ಯ ಬಲ 75. ಈವರೆಗೂ 650ಕ್ಕೂ ಹೆಚ್ಚು ಜನ ಸದಸ್ಯರನ್ನು ಕಂಡಿದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲೇ ಎಡವುತ್ತಿವೆ ಎಂಬುದು ಒಪ್ಪಬೇಕಾದ ಸತ್ಯ. ಹಣವಂತವರಿಗೆ, ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ನೀಡುವ ಪರಿಪಾಠ ಬೆಳೆದಿದೆ. ಇಲ್ಲಿಯೂ ಶಿಕ್ಷಕರ, ಪದವೀಧರರ, ವಿಧಾನಸಭೆಯಿಂದ ಗೆಲ್ಲುವವರು ಅವರ ಮತದಾರರನ್ನು ಭ್ರಷ್ಟರನ್ನಾಗಿ ಮಾಡಿರುವುದು ಸುಳ್ಳೇನೂ ಅಲ್ಲ. ಅದರಲ್ಲೂ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಿಗೆ ನಡೆದ ಕಳೆದ ಎರಡು ಚುನಾವಣೆಗಳಲ್ಲಿ ಮದ್ಯ ಹಾಗೂ ಉಡುಗೊರೆಗಳ ಸುರಿಮಳೆಯೇ ಆಗಿದೆ. ಕೆಳಮನೆ ಟಿಕೆಟ್ಗಳು ಮಾರಾಟವಾಗುತ್ತಿವೆ ಎಂಬ ಆರೋಪಗಳಿದ್ದವು. ಆ ಪರಿಸ್ಥಿತಿ ಮೇಲ್ಮನೆಗೂ ಬಂದಿದೆ ಎಂಬ ದೂರುಗಳು ಸರ್ವೆಸಾಮಾನ್ಯವಾಗಿವೆ. ಪಕ್ಷಕ್ಕೆ ದುಡಿದ ಹಿರಿಯರನ್ನು ಆಯ್ಕೆ ಮಾಡುವ ಪ್ರವೃತ್ತಿ ಮಾಯವಾಗುತ್ತಿದೆ. ಆಯ್ಕೆಯಾದವರಿಗೆ ಯಾವುದೇ ಪಕ್ಷವಾಗಲಿ, ಪರಿಷತ್ ಸಚಿವಾಲಯವಾಗಲಿ ಪ್ರಶಿಕ್ಷಣ ತರಗತಿಗಳನ್ನು ನಡೆಸುತ್ತಿಲ್ಲ. ಸದಸ್ಯರಲ್ಲಿಯೂ ಅಧ್ಯಯನಶೀಲತೆ ಮಾಯವಾಗಿದೆ, ಸದನದ ಹಿಂದಿನ ಕಲಾಪಗಳ ಬಗ್ಗೆ ಅಧ್ಯಯನ ಮಾಡುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಗ್ರಂಥಾಲಯವನ್ನೇ ಯಾರೊಬ್ಬರು ಬಳಸುತ್ತಿಲ್ಲ. ಈ ಎಲ್ಲ ಅಂಶಗಳು ಪರಿಷತ್ತಿನ ಘನತೆ ಕುಸಿಯಲು ಕಾರಣವಾಗಿದೆ. ಆದ್ದರಿಂದಲೇ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಿಂದಲೇ ಬದಲಾವಣೆ ಮಾಡಿಕೊಳ್ಳಬೇಕಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಹಾಗೆಯೇ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕದಿದ್ದರೆ ಜನತಂತ್ರ ವ್ಯವಸ್ಥೆ ಉಳಿಯುವುದಿಲ್ಲ ಎಂಬುದು ಸಾರ್ವಜನಿಕ ಅಭಿಪ್ರಾಯ.