

ರಾಯಚೂರು: ಇಂದು ಮಾನ್ವಿಯಲ್ಲಿ ನಡೆದ ಬೃಹತ್ ಸ್ವಾಭಿಮಾನಿ ಸಮಾವೇಶದಲ್ಲಿ ಸೇರಿದ್ದ ಸುಮಾರು 40 ಸಾವಿರಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಈ ನಾಡಿನ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಬೇಕು ಎಂದು ಕಾರ್ಯಕ್ರಮಗಳನ್ನು ರೂಪಿಸಿದ್ದು ತಪ್ಪಾ? ಬಾಬಾ ಸಾಹೇಬ್ ಅಂಬೇಡ್ಕರರ ಆಶಯದಂತೆ ಸಮಸಮಾಜ ನಿರ್ಮಾಣ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದು ತಪ್ಪಾ? ಎಂದು ಹೇಳಿದರು.
"ಸಮಾಜದ ಎಲ್ಲಾ ಜಾತಿ, ಧರ್ಮಗಳ ಬಡವರ ಪರವಾಗಿ ನಾನು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದೇನೆ. ಹಿಂದುಳಿದ ವರ್ಗಕ್ಕೆ ಸೇರಿದ ನಾನು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಬಿಜೆಪಿ-ಜೆಡಿಎಸ್ ನಾಯಕರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಒಮ್ಮೆಯು ಸಾರ್ವಜನಿಕವಾಗಿ ಕಾಣಿಸಿಕೊಳ್ಳದ, ರಾಜಕೀಯದ ಕಡೆಗೆ ಮುಖವೂ ಹಾಕದ ನನ್ನ ಪತ್ನಿಯನ್ನು ಕೂಡ ದ್ವೇಷ ರಾಜಕಾರಣಕ್ಕಾಗಿ ಬೀದಿಗೆ ತಂದಿದ್ದಾರೆ. ಇದನ್ನು ನೀವು ಸಹಿಸಿಕೊಳ್ತೀರಾ? ನಾನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದಾಗ ಸರ್ಕಾರಿ ಕಚೇರಿಗಳಲ್ಲಿ ಇರುತ್ತಿದ್ದ ಇಂಗ್ಲಿಷ್ ಟೈಪ್ ರೈಟರ್ಗಳನ್ನು ಕಿತ್ತುಕೊಂಡು ಕನ್ನಡ ಟೈಪ್ ರೈಟರ್ಗಳನ್ನು ಕೊಡುತ್ತಿದ್ದೆ" ಎಂದರು.
"ಬಿಜೆಪಿಯವರು ಹಿಂದುಳಿದ ಸಮುದಾಯಗಳ, ಬಡಜನರ, ಅಲ್ಪಸಂಖ್ಯಾತರ ವಿರೋಧಿಗಳು. ಬಡವರ ಪರವಾದ ಕಾರ್ಯಕ್ರಮಗಳನ್ನು ರೂಪಿಸಿದ ಕಾರಣಕ್ಕೆ ನನ್ನನ್ನು ಅಧಿಕಾರದಿಂದ ಇಳಿಸಬೇಕು ಎಂದು ನಿರ್ಧರಿಸಿ, ವಿನಾಃಕಾರಣ ನಿತ್ಯ ನನ್ನ ರಾಜೀನಾಮೆಗೆ ಅಗ್ರಹಿಸುತ್ತಿದ್ದಾರೆ. ನನಗೂ ಈ ರಾಜಕೀಯ ಷಡ್ಯಂತ್ರಗಳಿಂದ ಬೇಸರವಾಗಿದೆ. ಆದರೂ ನಾನು ಜನರಿಗಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಬಿಜೆಪಿ- ಜೆಡಿಎಸ್ ನಾಯಕರ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡುವುದಿಲ್ಲ" ಎಂದು ಹೇಳಿದರು.