

ಬೆಂಗಳೂರು: ಕೆಲವೊಂದು ಸಿನಿಮಾಗಳು ಸ್ಟಾರ್ ನಟರ ಮುಖವಾಣಿಯಿಂದಲೇ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡರೆ ಇನ್ನೂ ಕೆಲವು ಚಿತ್ರಗಳು ಒಳ್ಳೆಯ ಕಥಾಹಂದರ, ಉತ್ತಮ ಪ್ರಚಾರ ಕಾರ್ಯಗಳಿಂದಲೇ ಗೆಲುವು ದಾಖಲಿಸುತ್ತದೆ. ಆದರೆ, ಈ ಬಾಲಿವುಡ್ ಚಿತ್ರವು ಬಿಡುಗಡೆಗೊಂಡ ಮೊದಲ ದಿನವೇ ಭಾರೀ ಟೀಕೆ, ವಿವಾದಕ್ಕೆ ಸಿಲುಕಿದರೂ ಸಹ ಅದನ್ನೇ ಮೈಲೇಜ್ ಆಗಿ ಪಡೆದು, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಕಂಡಿತು. ಈ ಮೂಲಕವೇ ಸಿನಿಮಾ ಯಶಸ್ಸಿನ ಹಾದಿ ಹಿಡಿದಿದ್ದು, ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಪಡೆಯಲು ಬಹಳ ಸಮಯ ತೆಗೆದುಕೊಂಡಿತು. ಅದಕ್ಕೆ ಕಾರಣ ಹೀಗಿದೆ.
ಬಾಲಿವುಡ್ ನಟಿ ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿದ ದ ಕೇರಳ ಸ್ಟೋರಿ ಮೇ 05, 2023ರಂದು ಜಾಗತಿಕವಾಗಿ ಬಿಡುಗಡೆಗೊಂಡಿದ್ದೇ ಆದರೂ ರಿಲೀಸ್ಗೂ ಮುನ್ನ ಹಾಗೂ ಬಳಿಕ ಭಾರೀ ವಿವಾದಕ್ಕೆ ಸಿಲುಕಿತ್ತು. ಸಾವಿರಾರು ಕೇರಳದ ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿರುವ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಇದಾಗಿದೆ ಎಂದು ಬಹಿರಂಗವಾಗಿ ನಿರ್ಮಾಪಕರು ಹೇಳಿದ್ದರು.
ಮಿಶ್ರ ವಿಮರ್ಶೆಗಳ ಹೊರತಾಗಿಯೂ ಈ ಸಿನಿಮಾ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದು ಚಿತ್ರಕ್ಕೆ ದೊಡ್ಡ ಹೊಡೆತ ಕೊಡುತ್ತದೆ ಎಂದೇ ಮೊದ ಮೊದಲು ಹೇಳಲಾಗಿತ್ತು. ಆದರೆ, ಈ ಅಂಶವೇ ಚಲನಚಿತ್ರಕ್ಕೆ ಭರ್ಜರಿ ಗೆಲುವು ನೀಡಿದ್ದು, ವಿವಾದ ಅಲೆಯಲ್ಲೇ ಭಾರತೀಯ ಗಲ್ಲಾಪೆಟ್ಟಿಗೆ ಧೂಳೇಬ್ಬಿಸಿದ ಈ ಚಿತ್ರವು ನಿರೀಕ್ಷೆಗೂ ಮೀರಿದ ಆದಾಯವನ್ನು ನಿರ್ಮಾಪಕರಿಗೆ ತಂದುಕೊಟ್ಟಿತು.
ಥಿಯೇಟರ್ನಲ್ಲಿ ಗೆಲವು ಸಾಧಿಸಿದ ಸಿನಿಮಾವನ್ನು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರ ಮಾಡುವ ಧೈರ್ಯ ಮೊದಲಿಗೆ ಯಾರು ಮಾಡಲಿಲ್ಲ. ಈ ಕಾರಣದಿಂದಲೇ ಕಳೆದ ವರ್ಷ ರಿಲೀಸ್ ಆದ ಈ ಚಿತ್ರವು ಇಲ್ಲಿಯವರೆಗೂ ಒಟಿಟಿಗೆ ಬಂದಿರಲಿಲ್ಲ. ಆದ್ರೆ, ಈಗ ಜೀ5 ದ ಕೇರಳ ಸ್ಟೋರಿ ಚಿತ್ರದ ಡಿಜಿಟಲ್ ಹಕ್ಕನ್ನು ಖರೀದಿಸಿದ್ದು, ತಮ್ಮ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದೆ.
ಫೆ.16, 2024ರಂದು ಲೈವ್ ಸ್ಟ್ರೀಮಿಂಗ್ ಪಡೆದ ಈ ಸಿನಿಮಾ ಇದೀಗ ಒಟಿಟಿಯಲ್ಲೂ ಮೈಲಿಗಲ್ಲು ಸಾಧಿಸಿದೆ. ಇತ್ತೀಚಿನ ವರದಿ ಪ್ರಕಾರ, ಜೀ5ನಲ್ಲಿ ರಿಲೀಸ್ ಆಗಿ ಇದೀಗ 30 ಕೋಟಿ ನಿಮಿಷಗಳಷ್ಟು ವೀಕ್ಷಣೆ ದಾಖಲಿಸಿದೆ. ಬಿಡುಗಡೆಗೊಂಡ ಎರಡೇ ವಾರಗಳಲ್ಲಿ ಈ ಗುರಿಯನ್ನು ಸಾಧಿಸಿರುವ ಚಿತ್ರವು ಪ್ರಸ್ತುತ ಬಹು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರದಲ್ಲಿ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ, ದೇವದರ್ಶಿನಿ, ವಿಜಯ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸನ್‌ಶೈನ್ ಪಿಕ್ಚರ್ಸ್‌ನ ವಿಪುಲ್ ಅಮೃತಲಾಲ್ ಶಾ ನಿರ್ಮಿಸಿರುವ ಈ ಚಿತ್ರಕ್ಕೆ ವಿಶಾಖ್ ಜ್ಯೋತಿ ಮತ್ತು ವಿರೇಶ್ ಶ್ರೀವಲ್ಸ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).