

ಬಿಹಾರ: ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಇದೀಗ 9ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮುಖೇನ ದಾಖಲೆ ನಿರ್ಮಿಸಿದ್ದಾರೆ. ಆರ್ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದ ನಿತೀಶ್, ಈಗ ಮಹಾಘಟಬಂಧನ್ನಿಂದ ಹೊರಬಂದಿದ್ದು, ಈ ಮೂಲಕ ಬಿಹಾರ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿದ್ದಾರೆ.
ಮಹಾಘಟಬಂಧನ್ನಿಂದ ಹೊರಬಂದ ನಿತೀಶ್ ಕುಮಾರ್ ಇದೀಗ ಬಿಜೆಪಿ ಜತೆಗೆ ಕೈಜೋಡಿಸಿ ಸರ್ಕಾರ ರಚಿಸಿದ್ದಾರೆ. 9ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್, ಈ ವೇಳೆ ಕಾರ್ಯಕರ್ತರ ಸಂತಸಕ್ಕೆ ಕಾರಣರಾದರು. ನಿತೀಶ್ ಅವರ ಪ್ರಮಾಣ ವಚನದ ಬೆನ್ನಲ್ಲೇ ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಹಾಗೂ ಸಾಮ್ರಾಟ್ ಚೌಧರಿ ಡಿಸಿಎಂ ಆಗಿ ಪ್ರಮಾಣ ವಚನ ಪಡೆದರು.
ಈ ವಿಚಾರಗಳು ರಾಜಕೀಯ ವಲಯದಲ್ಲಿ ಹಲವು ತಿರುವು ಪಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮದಾಸ ಅಠವಳೆ, "ನಿತೀಶ್ ಕುಮಾರ್ ನಿರ್ಧಾರ ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಹೊಡೆತವಾಗಿದೆ. ಅವರ ಈ ನಿರ್ಧಾರ ಬಿಹಾರದ ಅಭಿವೃದ್ಧಿಗೆ ಹೆಚ್ಚು ಮೀಸಲಾಗಲಿದೆ.
ಇದು ಈಗ ಕಾಂಗ್ರೆಸ್‌ಗೆ ದೊಡ್ಡ ಸವಾಲು. ಅವರನ್ನು 'ಪಲ್ಟು ರಾಮ್' ಎಂದು ಕರೆಯುವುದು ಸರಿಯಲ್ಲ. ಕಾರಣ ಕೆಲವು ನಿರ್ಧಾರಗಳನ್ನು ನಾವು ಪರಿಗಣಿಸಬೇಕಾಗಿದೆ. ಸರಿಯಾದ ಸಮಯಕ್ಕೆ ಕೆಲವು ನಿರ್ಣಯಗಳನ್ನು ಮಾಡಬೇಕು ಅದನ್ನು ನಿತೀಶ್ ಈಗ ಮಾಡಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ,(ಏಜೆನ್ಸೀಸ್).