ಈ ಒಪ್ಪಂದ ಮಾಡಿಕೊಂಡ್ರೆ ಮಾತ್ರ ನಟಿಯಾಗಿ ಮುಂದುವರಿಕೆ! ಇಲ್ಲದಿದ್ರೆ..: ಶಾಕಿಂಗ್ ಸಂಗತಿ ಬಿಚ್ಚಿಟ್ಟ ಹಿರಿಯ ನಟಿ | Sheeba Akashdeep

ವಿಜಯವಾಣಿ - 2025-02-15T175456.490
Published on

Sheeba Akashdeep: ಚಿತ್ರರಂಗದಲ್ಲಿ ಒಂದೊಳ್ಳೆ ಅವಕಾಶ ಪಡೆಯಲು ನಟಿಮಣಿಯರು ಪಡುವ ಹರಸಾಹಸ ಅಷ್ಟಿಷ್ಟಲ್ಲ. ದೊಡ್ಡ ಚಿತ್ರಗಳಲ್ಲಿ ನಟಿಸುವ ಕನಸನ್ನು ಕಟ್ಟಿಕೊಂಡು ಚಿತ್ರೋದ್ಯಮಕ್ಕೆ ಕಾಲಿಡುವ ಉದಯೋನ್ಮುಖ ನಟಿಯರು, ಸಣ್ಣ ಪಾತ್ರ ಸಿಕ್ಕರೂ ಸಾಕಪ್ಪ, ನಮ್ಮ ಅಭಿನಯದ ಛಾಪು ಮೂಡಿಸಿ, ಹೆಚ್ಚೆಚ್ಚು ಅವಕಾಶ ಪಡೆಯಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ, ಉದ್ಯಮದಲ್ಲಿ ನಿರ್ದೇಶಕರು ಮತ್ತು ನಿರ್ಮಾಪಕರು ಆಡುವ ಕೆಲವು ಮಾತುಗಳು ಅದನ್ನೆಲ್ಲ ಒಂದು ನಿಮಿಷ ನುಚ್ಚುನೂರು ಮಾಡಿಬಿಡುತ್ತದೆ. ಇಂತಹದ್ದೇ ಒಂದು ವಿಷಯವನ್ನು ಬಾಲಿವುಡ್​ನ ಹಿರಿಯ ನಟಿಯೊಬ್ಬರು ಬಹಿರಂಗವಾಗಿ ಹಂಚಿಕೊಂಡಿರುವುದು ಸದ್ಯ ಸಿನಿಪ್ರಿಯರನ್ನು ಅಚ್ಚರಿಗೊಳಿಸಿದೆ.

90ರ ದಶಕ

"ಮದುವೆ ಮತ್ತು ಗರ್ಭಧಾರಣೆಯಿಂದ ದೂರವಿದ್ದರೆ ಮಾತ್ರ ನಿಮಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತದೆ ಎಂಬ ಒಪ್ಪಂದವನ್ನು ಅಂದಿನ ನಿರ್ಮಾಪಕರು ನಮ್ಮ ಮುಂದಿಡುತ್ತಿದ್ದರು. ಇದಕ್ಕೆ ಓಕೆ ಅನ್ನೋದಾದರೆ ಮಾತ್ರ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದರು. ಇಂದು ಚಲನಚಿತ್ರೋದ್ಯಮವು ಬಹಳಷ್ಟು ಬದಲಾಗಿದೆ. ಈಗ ಎಲ್ಲಾ ಉನ್ನತ ಹೀರೋಯಿನ್​ಗಳು ಸ್ಟಾರ್ ನಟರೊಂದಿಗೆ ತೆರೆಯಲ್ಲಿ ಮಿಂಚುತ್ತಾರೆ. ಇದರಲ್ಲಿ ಅಂತಹ ದೊಡ್ಡ ವ್ಯತ್ಯಾಸವಿಲ್ಲ" ಎಂದು 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಮಿಂಚಿದ ಹಿರಿಯ ನಟಿ ಶೀಬಾ ಆಕಾಶ್‌ದೀಪ್ ಸಬೀರ್ ಹೇಳಿದ್ದಾರೆ.

"ಹೀರೋಗಳು ಅಂದಿನ ಕಾಲದಿಂದಲೂ ನಾಯಕರಾಗಿಯೇ ಉಳಿದಿದ್ದಾರೆ. ಆದರೆ, ನಮಗೆ ಆ ಅವಕಾಶ ಸಿಗಲ್ಲ. ನಾಯಕಿಯಾಗಲು ನಿರ್ದಿಷ್ಟ ಸಮಯದ ಮಿತಿ ಇರುತ್ತದೆ. ಈ ಹಿಂದೆ, ಒಂದು ಭಯಾನಕ ಸ್ಥಿತಿಯಿತ್ತು. ನಮ್ಮ ಪೀಳಿಗೆಯಲ್ಲಿ ಯಾರಿಗಾದರೂ ಬಾಯ್​ಫ್ರೆಂಡ್​ ಇದ್ದರೆ, ಅದನ್ನು ಜೋರಾಗಿ ಹೇಳಲು ಹೆದರುವಂತ ಪರಿಸ್ಥಿತಿ ಇತ್ತು. ಕಾರಣ, ಆಗ ನಾಯಕಿಯರು ಸಿಂಗಲ್ ಆಗಿಯೇ ಇರಬೇಕೆಂಬ ನಿಯಮವಿತ್ತು. ಇದನ್ನೂ ಮೀರಿ ಏನಾದರೂ ಗೊತ್ತಾದ್ರೆ, ಅವರ ಸಿನಿ ಅವಕಾಶ ಅಲ್ಲಿಗೆ ಮೊಟಕುಗೊಳ್ಳುತ್ತಿತ್ತು" ಎಂದು ಹೇಳಿದ್ದಾರೆ.

ಭಯಾನಕ ಒಪ್ಪಂದ

"ನಾವು ಯಾರನ್ನಾದರೂ ಪ್ರೀತಿಸುತ್ತಿದ್ದೇವೆಂದು ಗೊತ್ತಾದರೆ, ಎಲ್ಲಾ ರೀತಿಯ ವದಂತಿಗಳು ಬಹಳ ವೇಗವಾಗಿ ಹರಡುತ್ತಿದ್ದವು. ಅಕಸ್ಮಾತ್ ನಾವೇನಾದರೂ ಬೇಗ ಮದುವೆಯಾದರೆ, ಅಲ್ಲಿಗೆ ಪ್ಯಾಕ್​ ಅಪ್ ಆದೆವು ಎಂದೇ ಅರ್ಥ! ಅದಕ್ಕಾಗಿಯೇ ನಿರ್ಮಾಪಕರು ನಮ್ಮೊಂದಿಗೆ ಮುಂಚಿತವಾಗಿಯೇ ಒಂದು ಅಗ್ರಿಮೆಂಟ್ ಮಾಡಿಕೊಳ್ಳುತ್ತಿದ್ದರು. ನಾವು ದಾಂಪತ್ಯ ಜೀವನಕ್ಕೆ ಕಾಲಿಡುವುದಿಲ್ಲ ಮತ್ತು ಮಕ್ಕಳನ್ನು ಹೊಂದುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಮಾಡಬೇಕಿತ್ತು. ಇದು ಅತ್ಯಂತ ಭಯಾನಕ ಒಪ್ಪಂದವಾಗಿತ್ತು. ಅಂದಿನ ಸಮಯಕ್ಕೆ ಇದು ನಿಜಕ್ಕೂ ಕಷ್ಟಕರವಾಗಿತ್ತು" ಎಂದು ತಮ್ಮ ಮನದಾಳದ ಮಾತನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net