ರಾಮಾಯಣದಲ್ಲಿ ಭರತ ಕಂಡ ದುಃಖವೇ ನನಗೂ ಎದುರಾಗಿದೆ: ಖಾಲಿ ಕುರ್ಚಿ ಪಕ್ಕದಲ್ಲಿಟ್ಟು ಅತಿಶಿ ಭಾವುಕ

ವಿಜಯವಾಣಿ - 2024-09-23T145513.015
Published on

ನವದೆಹಲಿ: ಭಾನುವಾರ (ಸೆ.15) ಮುಂದಿನ 48 ಗಂಟೆಗಳೊಳಗೆ ತಮ್ಮ ಮುಖ್ಯಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಘೋಷಿಸುವುದಾಗಿ ಹೇಳಿದ್ದ ಅರವಿಂದ್ ಕೇಜ್ರಿವಾಲ್, ತಮ್ಮ ಮಾತಿಗೆ ತಕ್ಕಂತೆ ರಾಜೀನಾಮೆ ಕೊಟ್ಟು ಇದೀಗ ತಮ್ಮದೇ ಪಕ್ಷದ ಸಚಿವೆ ಅತಿಶಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಿದ್ದಾರೆ. ಈ ಹಿಂದೆ ಕೇಜ್ರಿವಾಲ್ ಸಿಎಂ ಸ್ಥಾನದಿಂದ ಕೆಳಗಿಳಿದರೆ ಮುಂದೆ ಅವರ ಪಕ್ಷದಿಂದ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬ ಕೌತುಕದ ಪ್ರಶ್ನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ, ಇಂದು ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ನೂತನ ದೆಹಲಿ ಮುಖ್ಯಮಂತ್ರಿಗಳಾಗಿ ಅತಿಶಿ ಅಧಿಕಾರ ಸ್ವೀಕರಿಸಿದ್ದಾರೆ.

ದೆಹಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಅತಿಶಿ, ಕಛೇರಿಯಲ್ಲಿ ತಾವು ಕುಳಿತ ಕುರ್ಚಿಯ ಪಕ್ಕದಲ್ಲಿ ಮತ್ತೊಂದು ಖಾಲಿ ಕುರ್ಚಿಯನ್ನು ಇರಿಸಿ ಭಾವುಕರಾಗಿ ಮಾತನಾಡಿದ್ದಾರೆ. "ಇಂದಿಗೂ ಅರವಿಂದ್ ಕೇಜ್ರಿವಾಲ್​ ಅವರೇ ನಮಗೆ ಮುಖ್ಯಮಂತ್ರಿಗಳು. ಅವರ ಸ್ಥಾನವನ್ನು ನಾವ್ಯಾರು ತುಂಬಲು ಸಾಧ್ಯವಿಲ್ಲ. ಕೇಜ್ರಿವಾಲ್ ಮತ್ತೆ ಅಧಿಕಾರಕ್ಕೆ ಬರುವವರೆಗೂ ಈ ಸೀಟು ಖಾಲಿಯೇ ಇರುತ್ತದೆ. ಅಂದು ರಾಮಾಯಣದಲ್ಲಿ ರಾಮ ತನ್ನ ಸಿಂಹಾಸನ ಬಿಟ್ಟು ವನವಾಸಕ್ಕೆ ಹೋದಾಗ ಭರತ ಬಹಳ ದುಃಖಕ್ಕೆ ಒಳಗಾಗುತ್ತಾನೆ. ಅಣ್ಣನ ಪಾದಾರಕ್ಷೆಯನ್ನು ಇಟ್ಟುಕೊಂಡೇ ಸಾಮ್ರಾಜ್ಯವನ್ನು ಆಳಿದ ಭರತನಂತೆಯೇ ಮುಂದಿನ ನಾಲ್ಕು ತಿಂಗಳ ಕಾಲ ಖಾಲಿ ಕುರ್ಚಿಯೊಂದಿಗೆ ನಾನು ಸಿಎಂ ಆಗಿ ಅಧಿಕಾರ ಮುಂದುವರೆಸುತ್ತೇನೆ" ಎಂದರು.

"ಮುಖ್ಯಮಂತ್ರಿ ಸ್ಥಾನಕ್ಕೆ ಮಾಡಿರುವ ನನ್ನ ಆಯ್ಕೆ ತಾತ್ಕಾಲಿಕ. ಕಳೆದ ಎರಡು ವರ್ಷಗಳಿಂದ ಬಿಜೆಪಿ ಅರವಿಂದ್ ಕೇಜ್ರಿವಾಲ್ ಮೇಲೆ ಕೆಸರೆರಚಾಟ ನಡೆಸುತ್ತಿದೆ. ಅವರನ್ನು 6 ತಿಂಗಳ ಕಾಲ ಜೈಲಿನಲ್ಲಿಟ್ಟು ಶಿಕ್ಷಿಸಿದರು. ಈಗ ದೆಹಲಿಯ ಜನರು ತಮ್ಮನ್ನು ಪ್ರಾಮಾಣಿಕರು ಎಂದು ಪರಿಗಣಿಸುವವರೆಗೂ ನಾನು ಮತ್ತೆ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಶಪಥ ಮಾಡಿದ್ದಾರೆ. ಈ ಕುರ್ಚಿ ಕೇಜ್ರಿವಾಲ್ ಅವರದ್ದು, ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ದೆಹಲಿಯ ಜನರು ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅಲ್ಲಿಯವರೆಗೆ ಈ ಖಾಲಿ ಕುರ್ಚಿ ಇಲ್ಲೇ ಇರುತ್ತದೆ" ಎಂದು ಅತಿಶಿ ಸ್ಪಷ್ಟಪಡಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net