ಜೂ. ಡಾಕ್ಟರ್​ಗಳಿಗೆ ಯಾವುದೇ ಬೆದರಿಕೆಯೊಡ್ಡಿಲ್ಲ! ಇದು ಶುದ್ಧ ಸುಳ್ಳು: ಸಿಎಂ ಮಮತಾ ಬ್ಯಾನರ್ಜಿ

ವಿಜಯವಾಣಿ (48)
Published on

ಪಶ್ಚಿಮ ಬಂಗಾಳ: ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆಯನ್ನು ಪ್ರತಿಭಟಿಸುತ್ತಿರುವ ವೈದ್ಯರಿಗೆ ತಾನು ಎಂದಿಗೂ ಬೆದರಿಕೆ ಹಾಕಿಲ್ಲ ಎಂದು ತನ್ನ ಮೇಲೆ ಬಿಜೆಪಿ ಮಾಡಿದ ಆರೋಪಗಳನ್ನು ತಳ್ಳಿಹಾಕಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಇದೆಲ್ಲಾ ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

ಬುಧವಾರ (ಆ.29) ವಿದ್ಯಾರ್ಥಿಗಳ ವಿಭಾಗದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, 21 ದಿನಗಳಿಂದ ಕರ್ತರ್ವ್ಯದಿಂದ ಹೊರಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿನ ಕಿರಿಯ ವೈದ್ಯರನ್ನು ಕೆಲಸಕ್ಕೆ ಮರಳುವಂತೆ ಒತ್ತಾಯಿಸಿದ ಅವರು, ಮುಷ್ಕರ ನಿರತ ವೈದ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಾನು ಬಯಸವುದಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ಭವಿಷ್ಯ ಹಾಳಾಗುವುದು ಬೇಡ ಎಂದು ಹೇಳಿದ್ದರು.

ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ-ಕೊಲೆಯನ್ನು ಖಂಡಿಸಿ, ನ್ಯಾಯಕ್ಕಾಗಿ ಪಟ್ಟು ಹಿಡಿದಿರುವ ವೈದ್ಯರಿಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ವರಿಷ್ಠರು ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಇದನ್ನು ವಿರೋಧಿಸಿರುವ ಮಮತಾ ಬ್ಯಾನರ್ಜಿ, ಇದೆಲ್ಲವೂ ಶುದ್ಧ ಸುಳ್ಳು. ಕಿರಿಯ ವೈದ್ಯರ ವಿರುದ್ಧ ನಾನು ಒಂದೇ ಒಂದು ಪದವನ್ನೂ ಕೂಡ ಮಾತನಾಡಿಲ್ಲ ಎಂದರು.

"ನಾನು ವೈದ್ಯಕೀಯ ವಿದ್ಯಾರ್ಥಿಗಳು ಅಥವಾ ಅವರ ಚಳುವಳಿಗಳ ವಿರುದ್ಧ ಒಂದೇ ಒಂದು ಪದವನ್ನು ಉಚ್ಚರಿಸಿಲ್ಲ ಎಂದು ಇಲ್ಲಿ ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಅಡ್ಡಿಪಡಿಸುವೆ ಬದಲಿಗೆ ನಾನು ಅವರ ಚಳುವಳಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಅವರಿಗೆ ಎಂದಿಗೂ ಬೆದರಿಕೆ ಹಾಕಿಲ್ಲ. ಈ ಆರೋಪ ಸಂಪೂರ್ಣ ಸುಳ್ಳು. ಕೇಂದ್ರದ ಬೆಂಬಲದೊಂದಿಗೆ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತಿದೆ ಮತ್ತು ಅರಾಜಕತೆ ಹಾಗೂ ಕಾನೂನುಬಾಹಿರತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಬ್ಯಾನರ್ಜಿ ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net