

ಆಂಧ್ರಪ್ರದೇಶ: ಟಾಲಿವುಡ್ನ ಐಕಾನ್ ಸ್ಟಾರ್, ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ ದಿ ರೈಸ್' ಭಾಗ 1 ತೆಲುಗು ಸಿನಿಮಾ 2021ರಲ್ಲಿ ರಿಲೀಸ್ ಆಗಿ, ಕೇವಲ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿತು. ಸಿನಿಮಾದಲ್ಲಿ ಸ್ಟೈಲಿಶ್ ಸ್ಟಾರ್ ಅಭಿನಯಕ್ಕೆ ಫಿದಾ ಆದ ಸಿನಿಪ್ರೇಕ್ಷಕರು, ನಟನ ಪಾತ್ರವನ್ನು ಮೆಚ್ಚಿ, ಪುಷ್ಪರಾಜ್ ನಡೆಯುವ ಶೈಲಿ, ಡೈಲಾಗ್ಗಳನ್ನು ಅನುಕರಣೆ ಮಾಡುತ್ತಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಚಿತ್ರವು ಸೆನ್ಸೇಷನಲ್ ಹಿಟ್ ಆಗುವುದರ ಜತೆಗೆ ಸಾಕಷ್ಟು ಜನಪ್ರಿಯತೆ ಗಳಿಸಿ, ಅಲ್ಲು ಅರ್ಜುನ್ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿತು.
ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರು. ಈ ಜೋಡಿಯನ್ನು ತೆರೆಯ ಮೇಲೆ ನೋಡಿದ ಸಿನಿಪ್ರಿಯರು, ಮುಂದಿನ ಭಾಗದಲ್ಲಿಯೂ ಇವರಿಬ್ಬರೇ ಜೋಡಿಯಾಗಿ ನಟಿಸಬೇಕು ಎಂದೆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಪ್ರೇಕ್ಷಕರ ಆಶಯದಂತೆಯೇ ಇದೀಗ ಪುಷ್ಪ ಭಾಗ 2ರ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ವರ್ಷದ ಆಗಸ್ಟ್ 15ರಂದು ಚಿತ್ರವನ್ನು ಜಾಗತಿಕವಾಗಿ ರಿಲೀಸ್ ಮಾಡಲು ಚಿತ್ರತಂಡ ಈಗಾಗಲೇ ದಿನಾಂಕವಿರುವ ಆಕರ್ಷಕ ಪೋಸ್ಟರ್ ಅನ್ನು ಸಹ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬಹಿರಂಗಪಡಿಸಿದೆ. ಇನ್ನು ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪರಾಜ್ ಪಾತ್ರವನ್ನು ಕೊಂಡಾಡಿದ್ದ ಸಿನಿಪ್ರಿಯರಿಗೆ ಈ ಸಂಗತಿ ತಿಳಿದರೆ ಖಂಡಿತ ಅಚ್ಚರಿ ಮೂಡುವುದರಲ್ಲಿ ಅನುಮಾನವೇ ಬೇಡ.
ಹೌದು, ಅಸಲಿಗೆ ಪುಷ್ಪರಾಜ್ ಪಾತ್ರವನ್ನು ನಿರ್ವಹಿಸಲು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಮೊದಲು ಕೇಳಲಾಗಿತ್ತು. ಆದರೆ, ಇದು ಅಂದುಕೊಂಡಂತೆ ನಡೆಯಲಿಲ್ಲ ಎಂದು ಚಿತ್ರರಂಗದ ಮೂಲಗಳು ಮಾಹಿತಿ ಹಂಚಿಕೊಂಡಿವೆ. ಆದರೆ, ಈ ಸುದ್ದಿ ತಿಳಿದ ಅನೇಕರು, ಆ ಪಾತ್ರಕ್ಕೆ ಅಲ್ಲು ಅರ್ಜುನ್ ಅವರೇ ಸರಿ, ಕೊಟ್ಟ ರೋಲ್ಗೆ ನ್ಯಾಯ ಒದಗಿಸಿದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ.