ಜಂಟಿ ಅಧಿವೇಶನಕ್ಕೆ ಕರೊನಾ ಕರಿಛಾಯೆ: ಫೆಬ್ರವರಿಯಲ್ಲಿ ಮೂರನೇ ಅಲೆ ಮತ್ತಷ್ಟು ತೀವ್ರ; ತಜ್ಞರ ಎಚ್ಚರಿಕೆಯಿಂದ ಸರ್ಕಾರಕ್ಕೆ ಇಕ್ಕಟ್ಟು

State Session
ವಾರಾಂತ್ಯ ಕರ್ಫ್ಯೂ ನಡುವೆಯೂ ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಜನಸಂಚಾರ.
Published on

| ಮೃತ್ಯುಂಜಯ ಕಪಗಲ್ ಬೆಂಗಳೂರು

ಬಿಗಿ ನಿರ್ಬಂಧಗಳ ನಡುವೆಯೂ ಸೋಂಕು ದೃಢತೆಯ ದರ ಏರುತ್ತಲೇ ಸಾಗಿದ್ದು, ವಿಧಾನಮಂಡಲದ ಸಂಭಾವ್ಯ ಜಂಟಿ ಅಧಿವೇಶನದ ಮೇಲೆ ಕರೊನಾ ಕರಿಛಾಯೆ ಆವರಿಸಿದೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ವರ್ಷದ ಮೊದಲ ಅಧಿವೇಶನ ಜನವರಿಯಲ್ಲಿ ಪ್ರಾರಂಭವಾಗುವುದು ಸಾಮಾನ್ಯ. ಸೋಂಕು ನಿಯಂತ್ರಣ ಮತ್ತು ಸಮರ್ಪಕ ನಿರ್ವಹಣೆಗೆ ವಿಧಿಸಿರುವ ನಿರ್ಬಂಧಗಳು ಜನವರಿ ಅಂತ್ಯದವರೆಗೆ ವಿಸ್ತರಣೆಯಾಗಿದ್ದು, ಸದ್ಯಕ್ಕೆ ಅಧಿವೇಶನದ ದಿನಾಂಕ ನಿಗದಿಯಾಗುವ ಲಕ್ಷಣಗಳಿಲ್ಲ. ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕು ಉಲ್ಬಣಿಸಿದೆ. ಜನರ ಜೀವ-ಜೀವನ ರಕ್ಷಣೆಗೆ ಆಡಳಿತಯಂತ್ರ ಪೂರ್ಣ ತೊಡಗಿಕೊಂಡಿದ್ದು, ಮಾರ್ಗಸೂಚಿ ಅನುಷ್ಠಾನದ ಮೇಲೆ ನಿಗಾವಹಿಸಿದೆ.

ಸರ್ಕಾರಕ್ಕೆ ಇಕ್ಕಟ್ಟು: ವಿಧಾನಮಂಡಲದ ಚಳಿಗಾಲ ಅಧಿವೇಶನ ನಡೆದಿರುವಾಗಲೇ ಮೊದಲ ಅಲೆ (2019) ಪ್ರವೇಶಿಸಿದ ಕಾರಣ ಸೋಂಕು ಹೆಚ್ಚಾಗಲಿದೆ ಎಂದು ಅಲ್ಪಾವಧಿಗೆ ಸೀಮಿತಗೊಳಿಸಲಾಯಿತು. ಸೋಂಕಿನ ಭೀತಿಯಿದ್ದರೂ ಪ್ರಕರಣಗಳು ತಗ್ಗಿದ್ದರಿಂದ ಕಳೆದ ಎರಡು (2020, 2021) ಜಂಟಿ ಅಧಿವೇಶನಗಳು ಜನವರಿಯಲ್ಲಿ ನಡೆಸಲು ಸರ್ಕಾರ ಶಕ್ತವಾಯಿತು. ಈ ಬಾರಿ ಜನವರಿಯಲ್ಲಿ ಮೂರನೇ ಅಲೆ ಅಪ್ಪಳಿಸಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಇಳಿಮುಖದ ಹಾದಿ ಹಿಡಿಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಫೆಬ್ರವರಿಯಲ್ಲಿ ಮೂರನೇ ತೀವ್ರತೆ ಮತ್ತಷ್ಟು ಹೆಚ್ಚಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವ ಕಾರಣ ಸಾಂವಿಧಾನಿಕ ಕರ್ತವ್ಯ ನಿಭಾಯಿಸಬೇಕಾದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಈ ಬಾರಿಯೂ ಅಲ್ಪಾವಧಿ: ಸೋಂಕು ನಿಯಂತ್ರಣಕ್ಕೆ ಬಂದ ತಕ್ಷಣವೇ ಜಂಟಿ ಅಧಿವೇಶನಕ್ಕೆ ದಿನಾಂಕ ಗೊತ್ತುಪಡಿಸುವ ಚಿಂತನೆ ಸರ್ಕಾರ ನಡೆಸಿದ್ದು, ಈ ಬಾರಿಯೂ ಅಲ್ಪಾವಧಿಯದಾಗುವ ಲಕ್ಷಣಗಳಿವೆ. ವಾರದಮಟ್ಟಿಗೆ ಅಧಿವೇಶನ ನಡೆಸಿ, ಕೆಲ ದಿನಗಳ ಅಂತರದ ನಂತರ ಬಜೆಟ್ ಅಧಿವೇಶನ ಕರೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ರ್ಚಚಿಸಿ ಅನುಮೋದನೆ ಪಡೆದು ರಾಜ್ಯಪಾಲರಿಗೆ ಶಿಫಾರಸು ಮಾಡಿದ ಬಳಿಕವಷ್ಟೇ ನಿಖರವಾದ ದಿನಾಂಕ ಗೊತ್ತಾಗಲಿದೆ. ಮೂರನೇ ಅಲೆ ಅಬ್ಬರವಿದ್ದಾಗ್ಯೂ ಸಂಸತ್ತಿನ ಜಂಟಿ ಅಧಿವೇಶನ ನಿಗದಿಯಾಗಿದೆ. ಆದರೆ ವಿಧಾನಮಂಡಲ ಅಧಿವೇಶನದ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲ ಗೆಹಲೋತ್ ಚೊಚ್ಚಲ ಭಾಷಣ: ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಅವರಿಗೆ ಚೊಚ್ಚಲ ಜಂಟಿ ಅಧಿವೇಶನವಾಗಲಿದ್ದು, ರಾಜ್ಯ ಸರ್ಕಾರದ ಮುಂದಿನ ನಡೆ ಕಟ್ಟಿ ಕೊಡಲಿದ್ದಾರೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹೊತ್ತಿಗೆ ಮತ್ತೊಂದು ಜಂಟಿ ಮತ್ತು ಬಜೆಟ್ ಅಧಿವೇಶನಕ್ಕೆ ಅವಕಾಶವಿರುವ ಕಾರಣ ಈ ಬಾರಿ ಭಾಷಣ ಬಗ್ಗೆ ಹೆಚ್ಚಿನ ನಿರೀಕ್ಷೆಯಿರಲಿದೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪಕ್ಷಾತೀತ ಆಗ್ರಹಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ, ಮುಂಬರುವ ಅಧಿವೇಶನಗಳ ಅವಧಿ ವಿಸ್ತರಿಸುವ ಬಗ್ಗೆ ರ್ಚಚಿಸಿ ತೀರ್ಮಾನಿಸಲಾಗುವುದು ಎಂಬ ಭರವಸೆ ನೀಡಿದ್ದರು. ಕರೊನಾ ಸ್ಥಿತಿಗತಿ ಮೇಲೆ ಅಧಿವೇಶನದ ಅವಧಿ ನಿರ್ಧಾರವಾಗಲಿದೆ. ಹಾಗೆಯೇ ಮತಾಂತರ ನಿಷೇಧ ಮಸೂದೆಯ ಭವಿಷ್ಯ ವಿಧಾನ ಪರಿಷತ್​ನಲ್ಲಿ ತೀರ್ಮಾನವಾಗಲಿದೆ.

ಇಂದು ಸಿಎಂ ಮಹತ್ವದ ಸಭೆ

ಬೆಂಗಳೂರು: ಕೋವಿಡ್ ಸೋಂಕಿತರಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ವಾರಂಟೈನ್ ಅವಧಿ ಸೋಮವಾರ ಕೊನೆಗೊಳ್ಳಲಿದೆ. ಭಾನುವಾರ ಸ್ವಾಬ್ ಟೆಸ್ಟ್ ಮಾಡಿಸಿದ್ದು, ಸೋಮವಾರ ವರದಿ ಪಡೆದ ಬಳಿಕ ಮತ್ತೊಮ್ಮೆ ವೈದ್ಯರಿಂದ ತಪಾಸಣೆ ಗೊಳಗಾಗಿ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಲು ಯೋಚಿಸಿದ್ದಾರೆ. ಅಂದಹಾಗೆ ಸೋಮವಾರ ಅವರು ಮೂರು ಪ್ರಮುಖ ಸಭೆಗಳಲ್ಲಿ ವರ್ಚುಯಲ್ ವೇದಿಕೆ ಮೂಲಕ ಭಾಗವಹಿಸುವರು. ಸರ್ಕಾರಿ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವ ಈ ಸರ್ಕಾರದ ಮಹತ್ವಾಕಾಂಕ್ಷಿಯ ಗ್ರಾಮ ಒನ್ ಯೋಜನೆ ಕುರಿತು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಜತೆಗೆ, ಕೋವಿಡ್ ನಿರ್ವಹಣೆಗೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮುಖ್ಯಕಾರ್ಯದರ್ಶಿ ಹಾಗೂ

ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸುವರು. ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ನಿಯಮ ಕಠಿಣಗೊಳಿಸುವ ಬಗ್ಗೆ ಸಿಎಂ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಗಮನಿಸಲು ಜವಾಬ್ದಾರಿ ಹಂಚಿಕೆ ಜತೆಗೆ ನಿಯಮಗಳನ್ನು ಬಿಗಿಗೊಳಿಸಿ ಮಾರ್ಗಸೂಚಿ ಪರಿಷ್ಕರಿಸುವ ಸಾಧ್ಯೆಯೂ ಇದೆ.

ಚರ್ಚೆಯಾಗುವ ಪ್ರಮುಖ ವಿಚಾರ
  • ನೈಟ್ ಕರ್ಫ್ಯೂ ಅವಧಿ ಹೆಚ್ಚಳ
  • ಸಭೆ ಸಮಾರಂಭಗಳಲ್ಲಿ ಮಿತಿ ಕಡಿಮೆ
  • ವ್ಯಾಪಾರ, ವಹಿವಾಟು ಅವಧಿ ಕಡಿತ
  • ನಿಯಂತ್ರಿತ ವಲಯ ಹೆಚ್ಚಳ, ಓಡಾಟಕ್ಕೆ ನಿರ್ಬಂಧ
  • ರಾಜಕೀಯ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ರದ್ದು
  • ಪ್ರೇಕ್ಷಕರಹಿತ ಕ್ರೀಡಾ ಚಟುವಟಿಕೆ
  • ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಅಂತರ ಕಾಯಲು ಗುರುತು ಕಡ್ಡಾಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net