

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕೈ ಟಿಕೆಟ್ ಘೋಷಣೆಯಾದ ದಿನದಿಂದಲೂ ಕಾಂಗ್ರೆಸ್ನಲ್ಲಿ ಅಪಸ್ವರ ಕೇಳಿಬರುತ್ತಿದೆ. ಟಿಕೆಟ್ ವಂಚಿತ ವೀಣಾ ಕಾಶಪ್ಪನವರ್ ಅಸಮಾಧಾನ ಇಂದಿಗೂ ಶಮನವಾಗದೆ ಇರುವುದು ಒಂದೆಡೆಯಾದರೆ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯ ಅಖಾಡದಲ್ಲಿ ಕಣಕ್ಕಿಳಿಯುವುದು ಪಕ್ಕಾ ಎಂಬುದು ಮತ್ತೊಂದೆಡೆ. ವೀಣಾ ಕೊನೆಗೊಳ್ಳದ ಬೇಸರಕ್ಕೆ ಭಾರೀ ಸಿಟ್ಟಾದ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಇದೀಗ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮುಧೋಳ ನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ತಿಮ್ಮಾಪುರ, ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಹಾಗೂ ಅವರ ತಂದೆ ಸಚಿವ ಶಿವಾನಂದ ಪಾಟೀಲ ಬಗ್ಗೆ ವೀಣಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ವಿಷಯ ವೀಣಾಗೆ ನೆನಪಿರಲಿ. ಕಳೆದ ಸಲ ವೀಣಾ ಚುನಾವಣೆ ಬಗ್ಗೆ ಸಚಿವ ಶಿವಾನಂದ ಪಾಟೀಲ ಓಡಾಡಿದ್ದಾರೆ. ಶಿವಾನಂದರು ಸಂಯುಕ್ತಾ ಸಲುವಾಗಿ ಅಷ್ಟು ಓಡಾಡುತ್ತಿದ್ದರೋ ಇಲ್ವೊ ಗೊತ್ತಿಲ್ಲ. ಆದ್ರೆ ವೀಣಾಗೆ ಟಿಕೆಟ್ ಕೊಟ್ಟಾಗ ರಾತ್ರಿ ಎರಡು ಗಂಟೆಗೆ ನನ್ನ ಮನೆ ಬಾಗಿಲಿಗೆ ಬಂದಿದ್ದರು.
ವೀಣಾ ಬರ್ತಾಳೋ, ಇಲ್ಲವೋ? ಏನಾದ್ರೂ ತೊಂದರೆ ಇದೆಯಾ? ಎಲೆಕ್ಷನ್ ಖರ್ಚಿಗೆ ತೊಂದರೆ ಇದ್ಯಾ? ಏನಾದ್ರು ಮಾಡಿ ಗೆಲ್ಲಿಸೋಣ ಅಂದಿದ್ದರು. ಪುತ್ರಿ ಸಂಯುಕ್ತಾ ಮೇಲೆ ಎಷ್ಟು ಪ್ರೀತಿ ಇದೆಯೋ ಅದರ ದುಪ್ಪಟ್ಟು ಪ್ರೀತಿ ವೀಣಾ ಕಾಶಪ್ಪನವರ ಮೇಲಿತ್ತು. ಇನ್ನೊಬ್ಬರ ಸಲುವಾಗಿ ಓಡಾಡಿದ ಶಿವಾನಂದ ಪಾಟೀಲ, ಅವರ ಮಗಳಿಗೆ ಟಿಕೆಟ್ ಕೇಳೋದ್ರಲ್ಲಿ ತಪ್ಪೇನಿದೆ? ಸಂಯುಕ್ತಾ ಏನೂ ಧಿಡೀರ್ ಅಂತ ಬಂದಿಲ್ಲ ಎಂದರು.
ವಿದ್ಯಾರ್ಥಿ ಲೈಫ್ನಿಂದ ಮದುವೆ ಆದ ಮೇಲೇನೂ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದಾರೆ. ಸಂಯುಕ್ತಾ ದಿಢೀರನೇ ಬಂದು ಟಿಕೆಟ್ ಪಡೆದಿದ್ದಾಳೆ ಎಂದು ಆರೋಪಿಸುವ ವೀಣಾಗೆ ಇದು ಗಮನದಲ್ಲಿರಲಿ ಎಂದ ತಿಮ್ಮಾಪುರ ನೇರವಾಗಿ ವೀಣಾ ಕಾಶಪ್ಪನವರ್ಗೆ ಟಾಂಗ್ ಕೊಟ್ಟಿದ್ದಾರೆ.