More

    ಪಕ್ಷೇತರ ಸ್ಪರ್ಧೆಗೆ ವಿನಯ್ ಒಲವು ಲೋಕ ಕಣಕ್ಕಿಳಿವ ಕುತೂಹಲಕ್ಕೆ ಶೀಘ್ರ ತೆರೆ   ಕಾಂಗ್ರೆಸ್‌ನ ಅಹಿಂದ ಮತ ಬುಟ್ಟಿಗೆ ಅಪಾಯ?

    ಡಿ.ಎಂ.ಮಹೇಶ್, ದಾವಣಗೆರೆ

    ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ, ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿಜಯಕುಮಾರ್ ದಾವಣಗೆರೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರಾ ಎಂಬ ಕುತೂಹಲಕ್ಕೆ ಶೀಘ್ರವೇ ತೆರೆ ಬೀಳಲಿದೆ.
    ವಿದ್ಯಾವಂತ ಯುವಕರು ರಾಜಕಾರಣಕ್ಕೆ ಬರಬೇಕೆಂಬ ಆಶಾವಾದದಿಂದಲೇ ದಾವಣಗೆರೆ ನೆಲದಲ್ಲಿ ರಾಜಕೀಯ ಬೇರು ಬಿಡಲು ಸಜ್ಜಾಗಿದ್ದ ವಿನಯ್‌ಕುಮಾರ್ ಗ್ರಾಮಾಂತರ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಕ್ಷೇತ್ರದ ಗಮನ ಸೆಳೆದಿದ್ದರು. ಟಿಕೆಟ್ ಘೋಷಣೆಗೂ ಮುನ್ನವೇ ಸುಮಾರು 700ಕ್ಕೂ ಹೆಚ್ಚು ಹಳ್ಳಿಗಳನ್ನು ತಲುಪಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದರು.
    ಕೊನೇ ಘಳಿಗೆಯಲ್ಲಿ ಪಕ್ಷದ ಹೈಕಮಾಂಡ್ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮಣೆ ಹಾಕಿ, ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪ್ರಕಟಿಸಿತು. ಇದರಿಂದ ಅಸಮಾಧಾನಗೊಂಡಿದ್ದ ವಿನಯಕುಮಾರ್ ಸಮೀಕ್ಷೆ ಹೆಸರಲ್ಲಿ ಆರಂಭಿಸಿದ್ದ ಗ್ರಾಮಾಂತರ ಪ್ರದೇಶಗಳ ಭೇಟಿಯ ಸೆಕೆಂಡ್ ಇನಿಂಗ್ಸ್ ಮುಗಿಯುವ ಹಂತದಲ್ಲಿದೆ.  
    ದಾವಣಗೆರೆ ದಕ್ಷಿಣ, ಜಗಳೂರು, ಹೊನ್ನಾಳಿ, ಚನ್ನಗಿರಿ, ಹರಿಹರ ವಿಧಾನಸಭಾ ಕ್ಷೇತ್ರಗಳ ಸುಮಾರು 130 ಹಳ್ಳಿಗಳಲ್ಲಿ ಕಳೆದ 12 ದಿನಗಳ ಕಾಲ ಸುತ್ತಾಟ ನಡೆಸಿದ್ದಾರೆ. ಹೋದೆಡೆಯಲ್ಲೆಲ್ಲ ಪಕ್ಷೇತರ ಸ್ಪರ್ಧಿಸಲು ಜನಾಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.
    ಹರಪನಹಳ್ಳಿ ಮತ್ತು ಮಾಯಕೊಂಡ ವಿಧಾನಸಭಾ ಕ್ಷೇತ್ರಗಳ ಭೇಟಿಯಷ್ಟೇ ಬಾಕಿ ಇದೆ. ಜನರ ಒತ್ತಡದಂತೆ ಪಕ್ಷೇತರ ಸ್ಪರ್ಧೆಯತ್ತ ಒಲವು ತೋರಿದ್ದಾರೆ ಎನ್ನಲಾದ ವಿನಯಕುಮಾರ್ ಏ.5 ಅಥವಾ 6ರೊಳಗಾಗಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.
    ಜಿಲ್ಲಾ ವರಿಷ್ಠರ ಕುರಿತು ಆರಂಭದಲ್ಲಿ ತಣ್ಣನೆ ಪ್ರತಿಕ್ರಿಯೆ ನೀಡಿರುತ್ತಿದ್ದ ವಿನಯಕುಮಾರ್, ಟೀಕೆಗೆ ಎದುರೇಟು ನೀಡಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ವಿರುದ್ಧ ಶಿಸ್ತುಕ್ರಮದ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ನೀಡಿರುವ ಎಚ್ಚರಿಕೆಗೂ ಸೊಪ್ಪು ಹಾಕಿಲ್ಲ.
    ನಾನು ವಲಸಿಗನಲ್ಲ, ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇನೆ. ಅದಿಲ್ಲದೇ ಹೋಗಿದ್ದರೆ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಔಟ್‌ರೀಚ್ ಘಟಕದ ರಾಜ್ಯ ಉಪಾಧ್ಯಕ್ಷನಾಗಲು ಹೇಗೆ ಸಾಧ್ಯವಾಗುತ್ತಿತ್ತು ಎಂದೂ ಮುಖಂಡರಿಗೆ ಪ್ರತ್ಯುತ್ತರ ನೀಡುತ್ತಲೇ ಸೆಡ್ಡು ಹೊಡೆದಿದ್ದಾರೆ.
    ಹಿಂದುಳಿದ ವರ್ಗಕ್ಕೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಅಂಶ ಮುಂದಿಟ್ಟುಕೊಂಡು ಸ್ವತಂತ್ರ ಸ್ಪರ್ಧೆಗೆ ಒಲವು ತೋರಿಸಿರುವ ವಿನಯ್‌ಕುಮಾರ್, ಎರಡೂ ಪಕ್ಷಗಳ ನಿರಂತರ ಕುಟುಂಬ ರಾಜಕಾರಣದ ವಿರುದ್ಧದ ಮತ ಯಾಚನೆ ತಂತ್ರ ನಡೆಸಿದ್ದಾರೆ. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಶಿಬಿರ ನಡೆಸಿ ಯುವ ಮತದಾರರನ್ನು ಸೆಳೆದಿದ್ದು ಮತಗಳಾಗಿ ಪರಿವರ್ತಿಸುವ ಉಮೇದಿನಲ್ಲಿದ್ದಾರೆ ಎನ್ನಲಾಗಿದೆ.
    ‘ವಿರೋಧಿ ನಡೆ ಬೇಡ, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು’ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಮನವರಿಕೆ ಮಾಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಪಕ್ಷೇತರವಾಗಿ ಸ್ಪರ್ಧಿಸದಂತೆ ತಿಳಿ ಹೇಳಿದ್ದಾರೆ. ಆದರೆ ಅದ್ಯಾವುದಕ್ಕೂ ವಿನಯ್ ಪ್ರತಿಕ್ರಿಯಿಸಿಲ್ಲ ಎಂದು ಮೂಲಗಳು ತಿಳಿಸಿವೆ.
    ಬಂಡಾಯ ಬಾವುಟ ಹಾರಿಸಲು ಮುಂದಾಗಿರುವ ವಿನಯ್‌ಕುಮಾರ್, ಹೈಕಮಾಂಡ್‌ನ ಉದ್ದೇಶಿತ ಶಿಸ್ತುಕ್ರಮದಿಂದ ಮತಲಾಭ ಪಡೆಯುವ ಬತ್ತಳಿಕೆ ಪ್ರಯೋಗಿಸುವ ಸಾಧ್ಯತೆ ಇಲ್ಲದಿಲ್ಲ. ಯುವಜನರ ಜತೆಗೆ ಕಾಂಗ್ರೆಸ್‌ನ ಅಹಿಂದ ಮತಬುಟ್ಟಿಗೆ ಕೈ ಹಾಕುವ ಅಪಾಯವಿರುವ ಹಿನ್ನೆಲೆಯಲ್ಲಿ ಕೈ ಪಡೆಗೆ ಸ್ವಲ್ಪ ಮಟ್ಟಿನ ಸವಾಲು ಎದುರಾಗಬಹುದು.

    ವಿಧಾನಸಭಾ ಕ್ಷೇತ್ರಗಳಿಗೆ ಓಡಾಡಿ ಅವರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಪಕ್ಷೇತರ ಸ್ಪರ್ಧೆಗೆ ಜನರು ಒಲವು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ನನ್ನ ನಿರ್ಧಾರ ಪ್ರಕಟಿಸಲಿದ್ದೇನೆ.
    ಜಿ.ಬಿ. ವಿನಯಕುಮಾರ್
    ಇನ್‌ಸೈಟ್ಸ್-ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts