ವಯನಾಡಿನಲ್ಲಿ ಹೆಚ್ಚುತ್ತಿದೆ ಕಳ್ಳರ ಕಾಟ; ರಕ್ಷಣಾ ಪಡೆಯ ಅಧಿಕಾರಿಗಳ ವೇಷದಲ್ಲಿ​ ದೋಚುತ್ತಿರುವ ಖದೀಮರು

Wayanad Landslide
Published on

ವಯನಾಡು: 360ಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ವಯನಾಡು ಗುಡ್ಡ ಕುಸಿತ ಪ್ರಕರಣದಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ನಾಪತ್ತೆಯಾಗಿರುವ 200ಕ್ಕೂ ಅಧಿಕ ಮಂದಿಗಾಗಿ ರಕ್ಷಣಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿವೆ.  ಭೂಕುಸಿತದಲ್ಲಿ ಸಾವಿರಾರು ಜನರು ನಿರಾಶ್ರಿತರು ಕುಟುಂಬಸ್ಥರು, ಮನೆ ಎಲ್ಲವನ್ನೂ ಕಳೆದುಕೊಂಡು ಅನಾಥರಾಗಿ ನಿಂತಿದ್ದಾರೆ. ಇದರ ನಡುವೆ ಕಳ್ಳರು ಕೈಚಳ ತೋರುತ್ತಿದ್ದು, ರಕ್ಷಣಾ ಪಡೆಗಳ ಅಧಿಕಾರಿಗಳೆಂದು ಹೇಳಿಕೊಂಡು ಮನೆಯಲ್ಲಿ ಅಳಿದುಳಿದಿರುವ ವಸ್ತುಗಳನ್ನು ದೋಚುತ್ತಿದ್ದಾರೆ.

ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಜನರು ವಾಸಿಸದ ಕಾರಣ ಕಳ್ಳರು ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ರಕ್ಷಣಾ ಪಡೆಗಳ ಅಧಿಕಾರಿಗಳೆಂದು ಹೇಳಿಕೊಂಡು ಮನೆಯಲ್ಲಿನ ಮೌಲ್ಯಯುತ ವಸ್ತುಗಳು ಕಳ್ಳತನ ಮಾಡುತ್ತಿದ್ದಾರೆ. ಇದಲ್ಲದೆ ಭೂಕುಸಿತ ಸಂಭವಿಸಿದ ಪ್ರದೇಶಗಳಿಗೆ ನೆರೆಯ ರಾಜ್ಯದ ಪ್ರವಾಸಿಗರು ಭೇಟಿ ನೀಡುತ್ತಿದ್ದು, ರೀಲ್ಸ್‌ ಮಾಡುತ್ತಾ ಸಾಮಾಜಿಕ ಪ್ರಜ್ಞೆಯನ್ನೇ ಕಳೆದುಕೊಂಡವರಂತೆ ವರ್ತಿಸುತ್ತಾ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

Wayanad Landslide

ದುರಂತದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾಗಿರುವವರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇದನ್ನು ಬಂಡವಾಳವಾಗಿಸಿಕೊಂಡಿರುವ ಖದೀಮರು, ಜನವಸತಿ ಇಲ್ಲದ ಕಾರಣ, ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಸಂತ್ರಸ್ತರಿಂದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರದೇಶಗಳಲ್ಲಿ ಗಸ್ತು ಆರಂಭಿಸಿದ್ದು, ರಾತ್ರಿ ವೇಳೆ ಭೂಕುಸಿತ ಪೀಡಿತ ಪ್ರದೇಶದಲ್ಲಿ ಓಡಾಟ ನಡೆಸದಂತೆ ನಿರ್ಬಂಧ ಹೇರಿದ್ದಾರೆ.

ಈ ಕುರಿತು ಮಾತನಾಡಿರುವ ಸಂತ್ರಸ್ತರೊಬ್ಬರು, ಭೂಕುಸಿತದ ಸಂದರ್ಭದಲ್ಲಿ ಪ್ರಾಣ ರಕ್ಷಣೆಗಾಗಿ ಮನೆಗಳನ್ನು ತೊರೆದು ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಮನೆಬಳಿ ತೆರಳಿ ಪರಿಶೀಲಿಸಿದಾಗ ಬಾಗಿಲುಗಳು ಮುರಿದಿದ್ದವು. ಟ್ಟೆಗಳು ಹಾಗೂ ಕೆಲವು ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿವೆ. ತುಂಬಾ ಜನರ ಮನೆಯಲ್ಲಿ ಈ ರೀತಿಯಾಗಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net