

ಬೆಂಗಳೂರು: ಹಣ ದೋಚಲೆಂದು ತಡರಾತ್ರಿ ಎಟಿಎಂ ಒಳಗೆ ನುಗ್ಗಿದ್ದ ಕಳ್ಳನನ್ನು ರೆಡ್ಹ್ಯಾಂಡ್ ಆಗಿ ಹಿಡಿಯಲಾಗಿದೆ.
ಮೈಕೋ ಲೇಔಟ್ನಲ್ಲಿ ಸೆನ್ಸಾರ್ ಕೊಟ್ಟ ಅಲರ್ಟ್ ನಿಂದ ಎಚ್ಚೆತ್ತ ಸಿಎಸ್ಎಸ್ ಸೆಕ್ಯೂರಿಟಿ ಏಜೆನ್ಸಿಯ ಅಧಿಕಾರಿ ಎನ್.ಎಂ.ನಾರಾಯಣ್ ಖದೀಮನನ್ನು ಸೆರೆ ಹಿಡಿಯಲು ನೆರವಾದರು. ಎಟಿಎಂ ಇಂಟರ್ನೆಟ್ ವೈಯರ್ ಮತ್ತು ಹಣದ ಬಾಕ್ಸ್ ಮುಂಭಾಗದ ಡೋರ್ ಕತ್ತರಿಸಿದ್ದ ಕಳ್ಳ ಇನ್ನು ಕೆಲವೇ ಹೊತ್ತಲ್ಲಿ ಹಣ ದೋಚಿಕೊಂಡು ಪರಾರಿಯಾಗಬೇಕಿತ್ತು. ಅಷ್ಟರಲ್ಲಿ ಬಂದ ನಾರಾಯಣ್ ಎಟಿಎಂ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಬಿಟ್ಟರು. ಮುಂದೇನಾಯ್ತು? ಇಲ್ಲಿದೆ ವಿವರ.
ಜುಲೈ 6ರಂದು ಸೆಕ್ಯೂರಿಟಿ ಗಾರ್ಡ್ಗಳ ತಪಾಸಣೆ ನಡೆಸುವ ಸಲುವಾಗಿ ನಾರಾಯಣ್ ರಾತ್ರಿ ರೌಂಡ್ಸ್ನಲ್ಲಿದ್ದರು. ಬೆಳಗಿನ ಜಾವ 5 ಗಂಟೆಯಲ್ಲಿ ವಿಜಯ ಬ್ಯಾಂಕ್ ಲೇಔಟ್ ಭವಾನಿ ಸದನ್ 4ನೇ ಹಂತದಲ್ಲಿ ಇರುವ ಎಚ್ಡಿಎಫ್ಸಿ ಬ್ಯಾಂಕ್ನ ಎಟಿಎಂಗೆ ಕಳ್ಳರು ನುಗ್ಗಿರುವ ಮಾಹಿತಿ ಸೆನ್ಸಾರ್ ಮೂಲಕ ನಾರಾಯಣ್ಗೆ ತಲುಪಿದೆ. ತಕ್ಷಣ ಎಚ್ಚೆತ್ತ ನಾರಾಯಣ್, ಅರ್ಧ ತಾಸಿನಲ್ಲಿಯೇ ಎಟಿಎಂ ಸ್ಥಳಕ್ಕೆ ಹೋದಾಗ ಒಳಗೆ ಅಪರಿಚಿತ ಇರುವುದು ಗೊತ್ತಾಗಿದೆ. ಅನುಮಾನ ಬಂದು ಎಟಿಎಂ ಬೂತ್ ಬಾಗಿಲು ಬಂದ್ ಮಾಡಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಡೋರ್ ಲಾಕ್ ಓಪನ್ ಮಾಡಿ ಪರಿಶೀಲನೆ ನಡೆಸಿದಾಗ ಅಪರಿಚಿತನ ಬಳಿ ರಾಡು ಪತ್ತೆಯಾಗಿದೆ. ಅಲ್ಲದೆ, ಎಟಿಎಂ ಇಂಟರ್ನೆಟ್ ವೈಯರ್, ಹಣದ ಬಾಕ್ಸ್ ಮುಂಭಾಗದ ಡೋರ್ ಕಟ್ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ಮುಂದುವರಿಸಿದ್ದು, ಇದೇ ರೀತಿ ಹಲವೆಡೆ ಕೃತ್ಯ ಎಸಗಿರುವ ಅನುಮಾನವಿದೆ ಎಂದು ಪೊಲೀಸರು ತಿಳಿಸಿದ್ದಾರೆ.