ಅಯ್ಯೋ ನನ್ನ ಕೂದಲು ಎಲ್ಲಿ? ಟೈಮ್​ ಮ್ಯಾಗಜಿನ್​​ನ ಮುಖಪುಟ ನೋಡಿ ಮುನಿಸಿಕೊಂಡ ಟ್ರಂಪ್​! Donald Trump

Donald Trump
Published on

ವಾಷಿಂಗ್ಟನ್​ : ತಮ್ಮ ನೇರ ನುಡಿ ಹಾಗೂ ಖಡಕ್​ ನಿರ್ಧಾರಗಳಿಗೆ ಹೆಸರುವಾಸಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ( Donald Trump ) ತಮ್ಮ ಲುಕ್​ಗೂ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಎಲ್ಲೇ ಹೋದರು ಟ್ರಂಪ್​ ಅವರ ಹೇರ್​ ಸ್ಟೈಲ್​ ಗಮನ ಸೆಳೆಯುತ್ತದೆ. ಇದೀಗ ಅದೇ ವಿಚಾರಕ್ಕೆ ಟ್ರಂಪ್​ ಕೋಪಗೊಂಡಿದ್ದಾರೆ. ಅಷ್ಟಕ್ಕೂ ಟ್ರಂಪ್​ಗೆ ಕೋಪ ತರಿಸಿದ್ದು ಯಾರು? ಅಂಥದ್ದೇನು ನಡೆಯಿತು? ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಪ್ರತಿಷ್ಠಿತ ಟೈಮ್​ ಮ್ಯಾಗಜಿನ್​​ನ ಕವರ್​ ಪೇಜ್​ನಲ್ಲಿ ಡೊನಾಲ್ಡ್​ ಟ್ರಂಪ್​ ಅವರ ಫೋಟೋ ಪ್ರಿಂಟ್​ ಆಗಿದೆ. ಆದರೆ, ಫೋಟೋದಲ್ಲಿ ತಲೆಗೂದಲು ಸರಿಯಾಗಿ ಕಾಣುತ್ತಿಲ್ಲ. ಒಂದು ರೀತಿಯಲ್ಲಿ ಟ್ರಂಪ್​ ಅವರಿಗೆ ಬೋಳು ತಲೆ ಇರುವಂತೆ ಕಾಣುತ್ತದೆ. ಹೀಗಾಗಿ, ಟ್ರಂಪ್​ ತುಂಬಾ ಅಸಮಾಧಾನಗೊಂಡಿದ್ದಾರೆ.

ತಮ್ಮ ಬಗ್ಗೆ ಹೊಗಳಿ ಬರೆದಿರುವ ಲೇಖನದ ಬಗ್ಗೆ ಕಡಿಮೆ ಮಾತನಾಡಿರುವ ಟ್ರಂಪ್​, ಮುಖಪುಟದಲ್ಲಿರುವ ಫೋಟೋವನ್ನು "ಸಾರ್ವಕಾಲಿಕ ಕೆಟ್ಟ ಫೋಟೋ" ಎಂದು ಜರಿದಿದ್ದಾರೆ. ಅವರು ನನ್ನ ಕೂದಲನ್ನೇ ಮಾಯ ಮಾಡಿದ್ದಾರೆ. ನನ್ನ ತಲೆಯ ಮೇಲೆ ತೇಲುತ್ತಿರುವ ಕಿರೀಟದಂತೆ ಕಾಣುವ ಏನೋ ಇತ್ತು ಆದರೆ, ಅದು ತುಂಬಾ ಚಿಕ್ಕದಾಗಿದೆ. ನೋಡಲು ನಿಜವಾಗಿಯೂ ವಿಚಿತ್ರವಾಗಿದೆ. ಕೆಳಗಿನ ಆಯಾಮದಿಂದ ಫೋಟೋಗಳನ್ನು ತೆಗೆಯಲು ನಾನೆಂದಿಗೂ ಇಷ್ಟಪಡಲಿಲ್ಲ. ಇದು ತುಂಬಾ ಕೆಟ್ಟದಾಗಿದೆ ಎಂದು ತಮ್ಮ ಟ್ರೂಥ್​ ಸೋಶಿಯಲ್​ ಮೀಡಿಯಾದಲ್ಲಿ ಟ್ರಂಪ್​ ಬೇಸರ ಹೊರಹಾಕಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಅವರು ಓವಲ್ ಕಚೇರಿಯ ತಮ್ಮ ರೆಸಲ್ಯೂಟ್ ಡೆಸ್ಕ್‌ನಲ್ಲಿ ಕುಳಿತಿರುವ ಟೈಮ್ ನಿಯತಕಾಲಿಕೆಯ ಫೋಟೋವನ್ನು ಕೂಡ ಟ್ರಂಪ್ ಇಷ್ಟಪಡಲಿಲ್ಲ. ಟೈಮ್ ನಿಯತಕಾಲಿಕೆ ಇನ್ನೂ ವ್ಯವಹಾರದಲ್ಲಿದೆಯೇ? ನಿಜಕ್ಕೂ ನನಗೆ ಅದು ತಿಳಿದಿರಲಿಲ್ಲ ಎನ್ನುವ ಮೂಲಕ ವ್ಯಂಗ್ಯವಾಡಿದ್ದರು. ಆದರೆ, ಇದೇ ವೇಳೆ ಟ್ರಂಪ್​ ಅವರು ಮಸ್ಕ್​ ಅವರನ್ನು ಹೊಗಳಿದ್ದರು.

"ಹಿಸ್ ಟ್ರಯಂಫ್" ಎಂಬ ಶೀರ್ಷಿಕೆಯುಳ್ಳ ಇತ್ತೀಚಿನ ಟೈಮ್ ಕವರ್ ಫೋಟೋವನ್ನು, ಗಾಜಾ ಕದನ ವಿರಾಮ ಮತ್ತು ಒತ್ತೆಯಾಳು ವಿನಿಮಯ ಒಪ್ಪಂದವನ್ನು ಟ್ರಂಪ್​ ಯಶಸ್ವಿಗೊಳಿಸಿದಕ್ಕೆ ಹಾಗೂ ಅಕ್ಟೋಬರ್ 7, 2023 ರಂದು ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧವನ್ನು ನಿಲ್ಲಿಸಿದಕ್ಕೆ ಗೌರವವಾಗಿ ಪ್ರಕಟಿಸಲಾಗಿದೆ.

ಅಂದಹಾಗೆ, ಸೋಮವಾರ (ಅ.13) 20 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್​ ಬಿಡುಗಡೆ ಮಾಡಿತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಸುಮಾರು 2,000 ಪ್ಯಾಲೆಸ್ತಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net