ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ ಫಲಿತಾಂಶ: ಅಜೇಯಸಿಂಹ ಪ್ರಥಮ, ಚಂದ್ರಿಕಾ ದ್ವಿತೀಯ, ಸುಮಾ ತೃತೀಯ! Story writing Competition

Story writing Competition
Published on

ಬೆಂಗಳೂರು: ವಿಜಯವಾಣಿ- ಸಾಹಿತ್ಯ ಪ್ರಕಾಶನ ದೀಪಾವಳಿ ಕಥಾ ಸ್ಪರ್ಧೆಯ ಫಲಿತಾಂಶ ( Vijayavani Deepavali Story writing Competition Results ) ಪ್ರಕಟವಾಗಿದೆ. ಅಜೇಯಸಿಂಹ ಕೆ.ವಿ. ಅವರ ‘ಮೌನದ ದೀಪ’ ಕಥೆ 20 ಸಾವಿರ ರೂ. ಮೊತ್ತದ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ. ಚಂದ್ರಿಕಾ ಹೆಗಡೆ ಮತ್ತಿಹಳ್ಳಿ ಅವರ ‘ದೀಪಾಲಕ್ಷ್ಮಿಯ ಕೈಗಳು’ ಕಥೆ 15 ಸಾವಿರ ರೂ. ಮೊತ್ತದ ದ್ವಿತೀಯ ಬಹುಮಾನ ಪಡೆದಿದ್ದು, ಸುಮಾ ಕಳಸಾಪುರ ಅವರ ‘ಸಂಕರ’ ಕಥೆ 10,000 ರೂ. ಮೊತ್ತದ ತೃತೀಯ ಬಹುಮಾನಕ್ಕೆ ಭಾಜನವಾಗಿದೆ. ಇದಲ್ಲದೆ, ಜಿ.ಪಿ. ಬಸವರಾಜು ಅವರ ‘ಮಾಯಾ ಕೋಲಾಹಲ’, ನಂದಿನಿ ಹೆದ್ದುರ್ಗ ಅವರ ‘ಕಾಯಾ... ಮನಸಾ’ ಮತ್ತು ದತ್ತು ಕುಲಕರ್ಣಿ ಅವರ ‘ಆಸ್ಟ್ರೇಲಿಯಾದಲ್ಲೊಂದು ಊರಾಯಣ’ ಕಥೆಗಳು ತೀರ್ಪಗಾರರ ಮೆಚ್ಚುಗೆ ಪಡೆದಿವೆ.

ನಾಡಿನ ಖ್ಯಾತ ವಿಮರ್ಶಕರಾದ ಎಚ್. ದಂಡಪ್ಪ ಹಾಗೂ ಎಸ್.ಆರ್. ವಿಜಯಶಂಕರ ತೀರ್ಪಗಾರರಾಗಿದ್ದರು. ಸ್ಪರ್ಧೆಗೆ ಈ ಬಾರಿ 1285 ಕಥೆಗಳು ಬಂದಿದ್ದವು. ಆ ಪೈಕಿ ಮೊದಲ ಹಂತದ ಪರಿಶೀಲನೆ ನಂತರ 870 ಕಥೆಗಳನ್ನು ಎರಡನೇ ಸುತ್ತಿನಲ್ಲಿ ಪರಿಶೀಲಿಸಲಾಯಿತು. ಬಳಿಕ, ಅದರ ಶೇ. 10, ಅಂದರೆ 87 ಕಥೆಗಳನ್ನು ತೀರ್ಪಗಾರರು ಸಾದ್ಯಂತವಾಗಿ ಓದಿ, ವಿವಿಧ ಕೋನಗಳಿಂದ ಒರೆಗೆ ಹಚ್ಚಿ ಬಹುಮಾನಕ್ಕಾಗಿ 3 ಮತ್ತು ಮೆಚ್ಚುಗೆ ಪಡೆದ 3 ಹೀಗೆ ಒಟ್ಟು 6 ಕಥೆಗಳನ್ನು ಆಯ್ಕೆ ಮಾಡಿದ್ದಾರೆ. ತೀರ್ಪು ಪ್ರಕ್ರಿಯೆಯಲ್ಲಿ ಕಥೆಗಾರರ ಹೆಸರು ಬಹಿರಂಗ ಪಡಿಸದೆ, ಕಥೆಗಳನ್ನು ಮಾತ್ರ ಓದಿ ಈ ಎಲ್ಲಾ ಆಯ್ಕೆಗಳು ನಡೆದಿವೆ.

VV Story

‘ಈ ಸಲದ ಕಥೆಗಳನ್ನು ಓದಿದಾಗ ಕಥೆಗಾರರು, ಕಥೆ ಹೇಳಲು ಭಾಷಾ ಹಿಡಿತ ಉತ್ತಮ ಮಟ್ಟದಲ್ಲಿರಬೇಕು ಎಂಬುದನ್ನು ಮನಗಂಡಂತೆ ಭಾಸವಾಗುತ್ತದೆ. ಕೆಲವು ವರುಷಗಳ ಹಿಂದೆ ಭಾಷೆಯ ಮಟ್ಟಿಗೆ ಇಂತಹ ಹಿಡಿತ ಸ್ಪರ್ಧೆಗೆ ಬಂದ ಕಥೆಗಳಲ್ಲಿ ಇತ್ತೆಂದು ಹೇಳಲಾಗದು. ಕನ್ನಡದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಅಭಿಜಾತ ಸಾಹಿತ್ಯ, ಅನುವಾದ ಸಾಹಿತ್ಯಗಳು ಮತ್ತು ಸಾಹಿತ್ಯೇತರ ಕೃತಿಗಳ ಓದು ಅದಕ್ಕೆ ಕಾರಣವಾಗಿರಬಹುದು. ಭಾಷೆ ಅಲ್ಲದೆ ಲೇಖಕರಿಗೆ ಹೇಳುವುದಕ್ಕೆ ಬೇರೆ ಮಾಧ್ಯಮಗಳಿಲ್ಲ. ಹಾಗಾಗಿ ಲೇಖಕರಲ್ಲಿ ಹೆಚ್ಚಾಗುತ್ತಿರುವ ಭಾಷೆಯ ಬಗೆಗಿನ ಅರಿವು ಸಂತೋಷದ ವಿಚಾರ. ಕೇವಲ ವಿವರಣೆಗಳಲ್ಲಿ ವಿರಮಿಸದೆ ಕಥೆಯನ್ನೊಂದು ಅನುಭವವಾಗಿ ಪರಿವರ್ತಿಸಬೇಕೆಂಬ ಲೇಖಕರ ಪ್ರಯತ್ನ ಭರವಸೆದಾಯಕ’ ಎಂದು ತೀರ್ಪಗಾರರಾದ ಎಚ್. ದಂಡಪ್ಪ ಹಾಗೂ ಎಸ್.ಆರ್. ವಿಜಯಶಂಕರ ಅಭಿಪ್ರಾಯಪಟ್ಟಿದ್ದಾರೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನಿತ ಕಥೆಗಳು ‘ವಿಜಯವಾಣಿ’ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಲಿದ್ದು, ವಿಶೇಷಾಂಕ ಶೀಘ್ರವೇ ಮಾರುಕಟ್ಟೆಗೆ ಬರಲಿದೆ. ಬಹುಮಾನಿತ ಹಾಗೂ ಮೆಚ್ಚುಗೆ ಪಡೆದ ಕಥೆಗಳು vijayavani.net ವೆಬ್​ಸೈಟ್​ನಲ್ಲಿ ಪ್ರಕಟವಾಗಲಿವೆ.

ಇಂತಹ ಕಥಾಸ್ಪರ್ಧೆಗಳ ಮಹತ್ವವೇನೂ ಕಡಿಮೆಯಲ್ಲ! ವಿಶೇಷಾಂಕದ ಸಂದರ್ಭ ದಲ್ಲಿ ಇಂತಹುದೊಂದು ದೊಡ್ಡ ಸಾಹಿತ್ಯಿಕ ಸಂಭ್ರಮವೇ ಕಂಡು ಬರುತ್ತದೆ. ಇಂತಹ ಸಂದರ್ಭಗಳಿಂದಲೇ ಕನ್ನಡದ ಈಗಿನ ಮತ್ತು ಹಿಂದಿನ ತಲೆಮಾರಿನ ಬಹುತೇಕ ಕಥೆಗಾರರು ಬೆಳಕಿಗೆ ಬಂದದ್ದು, ಖ್ಯಾತರಾದದ್ದು. ಕನ್ನಡದ ಸೃಜನಶೀಲ ಪ್ರತಿಭೆಗಳು ಬೆಳಕುಗಾಣುವುದೇ ಇಂತಹ ವೇದಿಕೆಗಳ ಮೂಲಕ. ಇಲ್ಲದಿದ್ದರೆ ಸಾವಿರಾರು ಕಥೆಗಳು ಸ್ಪರ್ಧೆಗೆ ಬಂದಿದ್ದು ಸಾಮಾನ್ಯ ಮಾತೇ? ಈ ಸ್ಪರ್ಧೆಗಳಲ್ಲಿ ಭಾಗವಹಿಸಿದವರೇ ಮುಂದೆ ವಿಶಾಲವಾದ ಭಿತ್ತಿಯಲ್ಲಿ ಬೃಹತ್ತಾದ ಕಥಾರಚನೆಗೆ ಯತ್ನಿಸುತ್ತಾರೆ. ಕಾದಂಬರಿ ಬರವಣಿಗೆಯತ್ತಲೂ ಧೇನಿಸುತ್ತಾರೆ. ವಿಜಯವಾಣಿಗೂ, ಸಾಹಿತ್ಯ ಪ್ರಕಾಶನಕ್ಕೂ ಇದಕ್ಕಿಂತ ದೊಡ್ಡ ಸಮಾಧಾನ ಬೇಕೇ?

| ಎಂ.ಎ. ಸುಬ್ರಹ್ಮಣ್ಯ ಸಾಹಿತ್ಯ ಪ್ರಕಾಶನ (ಬಹುಮಾನಗಳ ಪ್ರಾಯೋಜಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net