

ಮುಂಬೈ: ಬಾಲಿವುಡ್ ಅಂಗಳದಲ್ಲಿ ಬಿಡುಗಡೆಗೊಂಡ ಈ ಎರಡು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುವುದರ ಜತೆಗೆ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆಯನ್ನು ಕಂಡಿತು.
ಸಿನಿಪ್ರಿಯರ ಗಮನಸೆಳೆದ ಈ ಸಿನಿಮಾಗಳು ರಿಲೀಸ್ ಆಗಿ ಇಷ್ಟು ದಿನಗಳು ಕಳೆದರೂ ಕೂಡ ಇನ್ನೂ ಯಾವುದೇ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ವೀಕ್ಷಣೆಗೆ ಲಭ್ಯವಾಗಿಲ್ಲ ಎಂಬ ಸಂಗತಿ ಸದ್ಯ ಅನೇಕರಲ್ಲಿ ಗೊಂದಲ ಮೂಡಿಸಿದೆ.
ಈ ವರ್ಷದ ಆರಂಭದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ ಬಾಲಿವುಡ್, ಮಧ್ಯಮ ಬಜೆಟ್ನಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಮತ್ತು 'ಜರಾ ಹಟ್ಕೆ ಜರಾ ಬಚ್ಕೆ' ಗಲ್ಲಾಪೆಟ್ಟಿಗೆಯಲ್ಲಿ ಘನ ಪರಿಣಾಮ ಬೀರಿದ ಚಲನಚಿತ್ರಗಳು ಎಂಬ ಪಟ್ಟಿಗೆ ಸೇರಿತು. ಆದ್ರೆ ಈ ಚಿತ್ರಗಳು ಇನ್ನೂ ಒಟಿಟಿಗೆ ಬರದಿರಲು ಕಾರಣವೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಕೇರಳದಲ್ಲಿ ನಡೆದ ನೈಜ ಘಟನೆ ಆಧರಿತ ಚಿತ್ರ ಎಂದು ಹೇಳಲಾದ 'ದಿ ಕೇರಳ ಸ್ಟೋರಿ' ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು. ಜತೆಗೆ ಭಾರೀ ವಿವಾದಕ್ಕೂ ಕೂಡ ಕಾರಣವಾಯಿತು.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಸಿನಿಮಾ ಇನ್ನೂ ಯಾಕೆ ಒಟಿಟಿ ಪ್ರವೇಶಿಸಿಲ್ಲ ಎಂಬ ಪ್ರಶ್ನೆಗೆ ನಿರ್ದೇಶಕ ಸುದೀಪ್ತೋ ಸೇನ್, "ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ನಾವು ಉತ್ತಮ ಕೊಡುಗೆಗಳನ್ನು ಸ್ವೀಕರಿಸಿಲ್ಲ. ಇದಲ್ಲದೆ, ನಮ್ಮ ಚಿತ್ರದ ಯಶಸ್ಸಿನಿಂದ ಅನೇಕರು ಬೇಸರಗೊಂಡಿದ್ದಾರೆ" ಎಂದು ಹೇಳಿದರು.
ಮತ್ತೊಂದೆಡೆ, 'ಜರಾ ಹಟ್ಕೆ ಜರಾ ಬಚ್ಕೆ' (ZHZB) ಯಾವುದೇ ವಿವಾದಕ್ಕೂ ಸಿಲುಕಿಲ್ಲ. ಆದರೆ ಈ ಚಿತ್ರವು ಕೂಡ ಇನ್ನೂ ಸ್ಟ್ರೀಮಿಂಗ್‌ಗೆ ಲಭ್ಯವಿಲ್ಲ. ಚಿತ್ರದ ಡಿಜಿಟಲ್ ಬಿಡುಗಡೆಯ ಹಿಂದಿನ ವಿಳಂಬವೇನು ಎಂಬುದು ತಿಳಿದಿಲ್ಲ.
ಕೆಲವು ವರದಿಗಳ ಪ್ರಕಾರ, ಈ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳು ಜಿಯೋ ಸಿನಿಮಾದಲ್ಲಿವೆ ಎಂದು ವದಂತಿಗಳು ಹೇಳಿವೆ. ಒಟ್ಟಾರೆ ಈ ಎರಡು ಸಿನಿಮಾಗಳ ಡಿಜಿಟಲ್ ರಿಲೀಸ್ ಬಗ್ಗೆ ಶೀಘ್ರವೇ ಮಾಹಿತಿ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).