

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ವಾರಾಂತ್ಯದಲ್ಲಿ ನಡೆದ ಸಂಚಿಕೆಗಳಲ್ಲಿ ಮನೆಯ ಸ್ಪರ್ಧಿಗಳಿಗೆಲ್ಲಾ ನಟ, ನಿರೂಪಕ ಸುದೀಪ್ ಮನವರಿಕೆಯ ಪಾಠವೂ ಮಾಡಿ, ಅವರವರ ತಪ್ಪು-ಸರಿಗಳನ್ನು ತಮ್ಮ ಶೈಲಿಯಲ್ಲೇ ಅರ್ಥೈಸಿದರು.
ಭಾನುವಾರ ನಡೆದ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ 'ಬಿಗ್' ಸದಸ್ಯರೊಡನೆ ತಮಾಷೆ ಮಾಡಿದ ಕಿಚ್ಚ, ಸಂಚಿಕೆಯ ಅಂತ್ಯದ ವೇಳೆ ವೀಕ್ಷಕರಿಗೆ ವರ್ತೂರು ಸಂತೋಷ್ ಬಿಗ್ ಬಾಸ್ಗೆ ಹಿಂತಿರುಗುವ ಬಗ್ಗೆಯಿದ್ದ ಗೊಂದಲ ಕುರಿತಂತೆ ಮಹತ್ವದ ಮಾಹಿತಿಯೊಂದನ್ನು ನೀಡಿದರು.
ಶನಿವಾರ ನಡೆದ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ಪ್ರಥಮ ಬಾರಿಗೆ ಸುದೀಪ್ ಸ್ಪರ್ಧಿಗಳೊಡನೆ ಹಾಸ್ಯ ಮಾಡದೆ, ನಗುವನ್ನು ಚೆಲ್ಲದೆ ಕೇವಲ ಗಂಭೀರವಾಗಿ ಕೆಲವು ಸಂಗತಿಗಳನ್ನು ಚರ್ಚಿಸಿದರು. ಯಾರಿಂದ ಯಾವ ತಪ್ಪುಗಳು ನಡೆದಿದೆ, ಅದರ ಪರಿಣಾಮ ಎಲ್ಲವನ್ನೂ ಕಿಚ್ಚ ಆಯಾ ಸ್ಪರ್ಧಿಗಳಿಗೆ ತಿಳಿ ಹೇಳಿದರು.
ದಸರಾ ಹಬ್ಬಕ್ಕೆ ವೀಕ್ಷಕರಿಂದ ಬಂದ ಗಿಫ್ಟ್ಗಳನ್ನು ಸದಸ್ಯರಿಗೆ ಹಂಚಿದ ಸುದೀಪ್, ಅದರಲ್ಲಿರುವ ಅರ್ಥವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಶನಿವಾರ ಸಿಡಿಯದ ನಗುವಿನ ಪಟಾಕಿಯನ್ನು ಸುದೀಪ್ ಭಾನುವಾರ ಮನೆ ಮನೆಯೊಂದಿಗೆ ತುಕಾಲಿ ಸಂತೋಷ್ ಅವರಿಂದ ಪ್ರಾರಂಭಿಸಿದರು.
ಮೈಕ್ ಕೊಟ್ಟು ತುಕಾಲಿ ಸಂತೋಷ್ ಅವರಿಂದ ಹಾಸ್ಯ ತೆಗೆದ ಸುದೀಪ್, ಆಯಾ ಸ್ಪರ್ಧಿಗಳ ಬಗ್ಗೆ ನಾನು ಹೇಳಿದಾಗ ನಿಮ್ಮ ಮನಸ್ಸಿನ ಮಾತನ್ನು ಹೇಳಬೇಕು ಎಂದು ಹೇಳಿದರು.
ಸಿರಿ ಹಾಗೂ ಭಾಗ್ಯಶ್ರೀ ಮಧ್ಯೆ ಸಂತೋಷ್ನ ಕುರಿಸಿ, ಒಂದು ದಿನ ಚೈನ್ನಲ್ಲೇ ನೀವು ಮೂವರು ಇರಬೇಕು ಎಂಬ ಟಾಸ್ಕ್ ಕೊಟ್ಟರು. ಇದೆಲ್ಲಾ ಆದ ನಂತರ ಈ ವಾರ ಯಾರು ಎಲಿಮಿನೇಟ್ ಆಗಿಲ್ಲ ಎಂಬುದನ್ನು ಖಚಿತಪಡಿಸಿದರು. ತದನಂತರ ವೀಕ್ಷಕರಿಗೆ ವರ್ತೂರು ಸಂತೋಷ್ ರಿ-ಎಂಟ್ರಿ ಆಗಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಿದರು.
"ನಾನು ಯಾವ ಗಳಿಗೆಯಲ್ಲಿ ಸಂತೋಷ್ ಅವರನ್ನು ವಾರ್ತೆ ಅಂದ್ನೋ ವಾರ್ತೆ ಆಗೋಗಿದ್ದಾರೆ ಅವರು, ಈಗ ಅವರಿಗೆ ಜಾಮೀನು ಸಿಕ್ಕಿರೋದ್ರಿಂದ ಬಿಗ್ ಬಾಸ್ ಮನೆಗೆ ವಾಪಸ್ ಮರಳಿ ಬರ್ತಾರಾ, ಇಲ್ವಾ? ಬಂದ್ರೇನು, ಬರದ್ದಿದ್ರೇನು? ಬರೋದ್ದಿದ್ರೆ ಯಾವಾಗ? ಇದನ್ನು ಬಿಗ್ ಬಾಸ್ ನಿಮಗೆ ಮಾತಿನಲ್ಲಿ ತಲುಪಿಸುತ್ತಾರೆ. ಇದನ್ನು ನೋಡೋದಕ್ಕೆ ಕಾಯುತ್ತೀರಿ" ಎಂದು ಸುದೀಪ್ ಹೇಳಿದರು.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.