ಜೈಲಿಗೆ ಹೋದವರಿಗೆ ಅಧಿಕಾರದ ಜತೆಗೆ ಗೌರವ: ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ವಿಷಾದ

C. Gouramma Chikkanna Social Service Award Ceremony mandya
Published on

ಮಂಡ್ಯ: ಜೈಲಿಗೆ ಹೋಗಿ ಬಂದವರಿಗೆ ಪ್ರಸ್ತುತ ದಿನಗಳಲ್ಲಿ ಅದ್ದೂರಿ ಸ್ವಾಗತ ಮತ್ತು ಅಧಿಕಾರ ಕೊಟ್ಟು ಗೌರವಿಸುವ ಕಾಲ ಬಂದಿದೆ. ಆದರೆ, ಇದು ಹೆಚ್ಚುಕಾಲ ಉಳಿಯುವುದಿಲ್ಲ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಸಿ.ಗೌರಮ್ಮ ಚಿಕ್ಕಣ್ಣ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಕರ್ತರು ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಲಿ. ಅಂತೆಯೇ ಬೇರೆಯವರಿಗೆ ತೊಂದರೆ ಕೊಡದಿರುವುದು ಕೂಡ ಒಂದು ರೀತಿಯ ಸಮಾಜ ಸೇವೆಯಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಾಗಬೇಕು. ಪತ್ರಿಕೆಯನ್ನು ಓದಿ ತೆಗೆದುಕೊಳ್ಳುತ್ತಿದ್ದ ಕಾಲ ಮತ್ತು ಸರ್ಕಾರವನ್ನೇ ಬುಡಮೇಲು ಮಾಡುವ ಸ್ಥಿತಿಯಿತ್ತು. ಅದು ಮರೆಯಾಗಿದೆ ಎಂದರು.

ಅಪರೂಪದ ಕಲೆಗಳು ಉಳಿಯಬೇಕು. ಇಲ್ಲಿನ ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ ಕೊಡುವ ಕೆಲಸ ಆಗಬೇಕು. ಕಲೆಗಳು ಜೀವಂತವಾಗಿರುವ ಕೆಲಸಗಳು ಸಮಾಜದಲ್ಲಿ ಹೆಚ್ಚು ಆಗಬೇಕು. ಪ್ರಸ್ತುತ ದಿನದಲ್ಲಿ ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಪರಿ ಹೆಚ್ಚಾಗುತ್ತಿದೆ. ಮಾತ್ರವಲ್ಲದೆ ವಿದೇಶದಲ್ಲಿ ವಾಸ ಮಾಡುತ್ತಿರುವ ಮಕ್ಕಳು ತಮ್ಮ ಪಾಲಕರು ಮರಣ ಹೊಂದಿದರೆ ಅವರ ಅಂತ್ಯಸಂಸ್ಕಾರಕ್ಕೂ ಬಾರದ ರೀತಿಯ ಕಡೆ ಸಮಾಜ ಸಾಗುತ್ತಿದೆ. ಕೆಲ ಮಕ್ಕಳು ಕುಳಿತಲ್ಲಿಯೇ ಅಂತ್ಯಸಂಸ್ಕಾರಕ್ಕೆ ಹಣ ಹಾಕುತ್ತೇವೆ, ನೀವೇ ಸಂಸ್ಕಾರ ಮಾಡಿಬಿಡಿ ಎನ್ನುವ ಮಟ್ಟಿಗೆ ಹೋಗಿದ್ದಾರೆ. ಇಂತಹ ಬೆಳವಣಿಗೆ ದೂರಾಗಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಮೌಲ್ಯವನ್ನು ಬೆಳೆಸಬೇಕು. ಅವರಿಗೆ ಆಸ್ತಿ ಮಾಡುವ ಬದಲು ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ಸಿ.ಗೌರಮ್ಮ ಚಿಕ್ಕಣ್ಣ ಸಮಾಜ ಸೇವಾ ಪ್ರಶಸ್ತಿ ಸ್ವೀಕರಿಸಿದ ಲೇಖಕ ಬಿ.ಚಂದ್ರೇಗೌಡ ಮಾತನಾಡಿ, ಕಾವೇರಿ ನೀರಿಗೆ ಸಂಬಂಧಿಸಿದಂತೆ ಮಂಡ್ಯ ಭಾಗಕ್ಕೆ 14 ಲಕ್ಷ ಹೆಕ್ಟೇರ್ ಹಾಗೂ ತಮಿಳುನಾಡಿನ 24 ಲಕ್ಷ ಹೆಕ್ಟೇರ್‌ಗೆ ನೀರು ಬಿಡುವ ಒಪ್ಪಿಗೆಯನ್ನು ಬ್ರಿಟಿಷ್ ಸರ್ಕಾರದಲ್ಲಿ ಆಗಿದೆ. ನಮಗೆ ಸ್ವಾತಂತ್ರ್ಯ ಬಂದಾಗಲೂ ಕೂಡ ಈ ಬ್ರಿಟಿಷ್ ಆಡಳಿತ ಒಪ್ಪುವುದಿಲ್ಲ ಎಂಬುದನ್ನು ಯಾರೂ ಹೇಳುತ್ತಿಲ್ಲ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಕಾರ್ಯದರ್ಶಿ ಲೋಕೇಶ್ ಚಂದಗಾಲು, ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ನಿರ್ದೇಶಕ ಸಿ.ಕೃಷ್ಣೇಗೌಡ, ನಿವೃತ್ತ ಪ್ರಾಂಶುಪಾಲ ಎಂ.ಪುಟ್ಟಸ್ವಾಮಿ, ಮುಖಂಡರಾದ ಚಿಕ್ಕಣ್ಣ, ವೈ.ಪಿ.ಚನ್ನಪ್ಪ ಇತರರಿದ್ದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಕೆ.ಭಾಗ್ಯಾ ಮಂಗಲ ಮತ್ತು ಲೇಖಕ ಬಿ.ಚಂದ್ರೇಗೌಡ ಅವರಿಗೆ ಸಿ.ಗೌರಮ್ಮ ಚಿಕ್ಕಣ್ಣ ಸಮಾಜ ಸೇವಾ ಪ್ರಶಸ್ತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net