

ಕಂಬಗಳು, ಮಂಟಪಗಳು, ದ್ವಾರಗಳು, ಗೋಪುರಗಳ ಕಲ್ಲಿನಲ್ಲಿ ಶಿಲ್ಪಿಯು ಕಲೆಯನ್ನು ಅರಳಿಸಿದ್ದಾನೆ. ಗಿರಿಜಾಂಬೆ, ಗಣಪತಿ, ಅರುಣಾಚಲೇಶ್ವರ, ಉಮಾ ಮಹೇಶ್ವರ, ಬೃಹದಾಕಾರದ ಶ್ರೀ ಭೋಗನಂದೀಶ್ವರ ಲಿಂಗವು ಅದ್ಭುತವಾದ ಕಲಾ ವೈಭವದ ಪ್ರಾಚೀನ ದೇಗುಲಗಳು.
ಜಿಲ್ಲೆ ಪೌರಾಣಿಕ, ಪ್ರಾಕೃತಿಕ, ಆಧ್ಯಾತ್ಮಿಕ ತಾಣಗಳಿಗೆ ಹೆಸರುವಾಸಿ. ಕಲೆ ಮತ್ತು ಶಿಲ್ಪ ವೈಭವದ ಗುಡಿ ಗೋಪುರಗಳು, ಗಿರಿ ಬೆಟ್ಟಗಳು, ಕೋಟೆ ಕೊತ್ತಲಗಳು ಸೇರಿ ಆಕರ್ಷಣೀಯ ತಾಣಗಳಿಗೆ ಹೆಸರಾಗಿದೆ. ಇದರ ನಡುವೆ ತನ್ನದೇ ಆದ ಹಲವು ಶತಮಾನಗಳ ಇತಿಹಾಸ, ವೈಶಿಷ್ಟ್ಯ ಹೊಂದಿರುವ ಶಿವನ ದೇಗುಲಗಳೂ ಸಾಕಷ್ಟಿವೆ. ನಿರಂತರವಾಗಿ ಸಂಭ್ರಮದ ಪೂಜಾ ಕಾರ್ಯಕ್ರಮಗಳ ಆಚರಣೆಯೊಂದಿಗೆ ಭಕ್ತರನ್ನು ಸೆಳೆಯುತ್ತಿವೆ.
ಕುಳಿತಿರುವ ನಂದಿಯಂತೆ ಆಕೃತಿ ಹೊಂದಿರುವಂತಹುದು ನಂದಿ ಗಿರಿಧಾಮ. ಇಲ್ಲಿನ ಬೆಟ್ಟದಲ್ಲಿ ಯೋಗ ನಂದೀಶ್ವರಸ್ವಾಮಿ, ಬೆಟ್ಟದ ತಪ್ಪಲಿನಲ್ಲಿ ಶ್ರೀ ಭೋಗನಂದೀಶ್ವರ ಸ್ವಾಮಿ ನೆಲೆಸಿದ್ದಾನೆ. ಇಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ದೇವರ ದರ್ಶನ ಪಡೆದರೆ ಕಾಶಿ ಯಾತ್ರೆ ಮಾಡಿದಷ್ಟೇ ಪುಣ್ಯ ಬರುತ್ತದೆ ಎಂಬುದು ನಂಬಿಕೆ. ಪ್ರಾಕೃತಿಕ ಈ ನೆಲೆವೀಡಿನಲ್ಲಿ ರಾಜಮಹಾರಾಜರ ಕಾಲದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಿರುವ ವಿಶಾಲವಾದ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದೆ. ನೋಡುಗರನ್ನು ಬೆರಗಾಗಿಸುತ್ತದೆ. ಕಂಬಗಳು, ಮಂಟಪಗಳು, ದ್ವಾರಗಳು, ಗೋಪುರಗಳ ಕಲ್ಲಿನಲ್ಲಿ ಶಿಲ್ಪಿಯು ಕಲೆಯನ್ನು ಅರಳಿಸಿದ್ದಾನೆ.
ಗಿರಿಜಾಂಬೆ, ಗಣಪತಿ, ಅರುಣಾಚಲೇಶ್ವರ, ಉಮಾ ಮಹೇಶ್ವರ, ಬೃಹದಾಕಾರದ ಶ್ರೀ ಭೋಗನಂದೀಶ್ವರ ಲಿಂಗವು ಅದ್ಭುತವಾದ ಕಲಾ ವೈಭವದ ಪ್ರಾಚೀನ ದೇಗುಲದಲ್ಲಿವೆ. ಸಂಕೀರ್ಣ ಕೆತ್ತನೆಗಳು, ಕಲ್ಯಾಣಿಯು ಮತ್ತು ವಾಸ್ತುಶಿಲ್ಪದ ವೈಶಿಷ್ಟ್ಯಗಳ ಸಂಯೋಜನೆಯು ಆಕರ್ಷಕ. ಮಹಾಶಿವರಾತ್ರಿ, ಕಾರ್ತಿಕ, ಮಾಘ ಮಾಸ ಸೇರಿ ವಿಶೇಷ ದಿನಗಳಲ್ಲಿ ಜನಸಾಗರದ ನಡುವೆ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ವಾರಗಟ್ಟಲೇ ನಡೆಯುವ ನಂದಿ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಭಕ್ತರು ಆಗಮಿಸುತ್ತಾರೆ.
ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ಯತೀಂದ್ರರ ತಪೋಭೂಮಿ ಕೈವಾರದ ಸಮೀಪವಿರುವ ಗುಹಾಂತರ ದೇವಾಲಯ ಕೈಲಾಸಗಿರಿ. ಬೃಹತ್ ಬೆಟ್ಟದ ಬಂಡೆಗಳಲ್ಲಿ ಕೊರೆದಿರುವ ಗುಹೆಗಳಿವೆ. ಇಲ್ಲಿ ಶಿವಲಿಂಗ, ಅಂಬುಜಾ, ದುರ್ಗಾ ದೇವಾಲಯಗಳಿದ್ದು, ಆಧ್ಯಾತ್ಮಿಕತೆಯ ಜತೆಗೆ ಪ್ರಕೃತಿಯ ಸೌಂದರ್ಯ ಸವಿಯುವ ಮನಮೋಹಕ ತಾಣ. ಶಿಖರಕ್ಕೆ ಕಡಿದಾದ ದಾರಿಯಲ್ಲಿ ಸಾಗುವ ಟ್ರೆಕ್ಕಿಂಗ್ ಖುಷಿ ನೀಡುತ್ತದೆ. ತಣ್ಣನೆಯ ಗಾಳಿ, ಪ್ರಶಾಂತ ವಾತಾವರಣದಲ್ಲಿ ನೆಮ್ಮದಿ ಸಿಗುತ್ತದೆ. ಅಂಬಾಜಿದುರ್ಗ ಪರ್ವತ ಶ್ರೇಣಿಯ ಒಂದು ಬೆಟ್ಟವನ್ನು ಕೊರೆದು ಕೈಲಾಸಗಿರಿ ಗುಹಾಲಯ ದೇವಸ್ಥಾನ ನಿರ್ವಿುಸಲಾಗುತ್ತಿದೆ. ಈ ಗಿರಿಯು ಜಿಲ್ಲೆಯ ಚಿಂತಾಮಣಿಯಿಂದ 8 ಕಿಮೀ ಹಾಗೂ ಬೆಂಗಳೂರಿನಿಂದ 75 ಕಿಮೀ ದೂರದಲ್ಲಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿನ ಶ್ರೀ ಮರಳು ಸಿದ್ದೇಶ್ವರ ದೇವಾಲಯವು ಹಳೇ ಕಾಲದ್ದು. ಇಲ್ಲಿಗೆ ಕಾಲಜ್ಞಾನಿ ಕೈವಾರ ತಾತಯ್ಯನವರು ದೇಗುಲಕ್ಕೆ ಬಂದು ತಂಗಿದ್ದರು. ಹಾಗೆಯೇ ಮರಳು ಸಿದ್ದ ಬಾರೋ, ಕೈಲಾಸ ಹಾದಿಯನ್ನು ತೋರೋ ಎಂದು ಹಾಡಿ ಹೊಗಳಿದ್ದಾರೆ. ಇಲ್ಲಿ ಮರಳು ಸಿದ್ದೇಶ್ವರ ಲಿಂಗ, ನವಗ್ರಹ, ಅಶ್ವತ್ಥಕಟ್ಟೆ ಇದೆ. ಪ್ರತಿವರ್ಷ ಕಾರ್ತೀಕ ಮಾಸದ ಕಡೇ ಸೋಮವಾರ ಭಕ್ತರಿಂದಲೇ ನೇರವಾಗಿ 1008 ಲೀಟರ್ ಹಾಲಿನ ಅಭಿಷೇಕ ನೆರವೇರಿಸುವ ಕಾರ್ಯಕ್ರಮ ನಡೆಯುತ್ತದೆ.
ಈಶ ಸದ್ಗುರು ನೇತೃತ್ವದಲ್ಲಿ ಸ್ಥಾಪನೆಯಾದ ಅಂತಾರಾಷ್ಟ್ರೀಯ ಆಧ್ಯಾತ್ಮಿಕ ತಾಣ ಆದಿಯೋಗಿ ಧ್ಯಾನ ಕೇಂದ್ರ. ಇಲ್ಲಿ ಶಿವನು ಯೋಗಿಯಾಗಿ ನೆಲೆಸಿದ್ದಾನೆ. ಯೋಗದ ಮೂಲಕ ಆಂತರಿಕ ಯೋಗಕ್ಷೇಮದ ಕಡೆಗೆ ಜನರನ್ನು ಪ್ರೇರೇಪಿಸುವ ಸಂದೇಶ ಸಾರುವಂತೆ 112 ಅಡಿ ಎತ್ತರದ ಆದಿಯೋಗಿ ಮೂರ್ತಿ ಕಾಣುತ್ತದೆ. ಬೃಹತ್ ನಾಗಮಂಟಪ, ತ್ರಿಶೂಲ, ಬಸವ, ವಿಶಾಲವಾದ ಧ್ಯಾನ ತಾಣ ಆಕರ್ಷಕ. ಪ್ರತಿದಿನ ಆದಿಯೋಗಿ ದಿವ್ಯ ದರ್ಶನಂ ಎಂಬ 3ಡಿ ಲೇಸರ್ ಶೋ ನಡೆಯುತ್ತದೆ. ಇದರ ಮೂಲಕ ಆದಿಯೋಗಿಯ ಕಥೆ ಮತ್ತು ಯೋಗದ ವಿಜ್ಞಾನವನ್ನು ಮನುಷ್ಯರಿಗೆ ಹೇಗೆ ನೀಡಲಾಯಿತು ಎಂಬುದನ್ನು ಆಧ್ಯಾತ್ಮಿಕ, ವೈಜ್ಞಾನಿಕವಾಗಿ ಹೇಳಲಾಗುತ್ತಿದೆ. ಇಲ್ಲಿನ ಬೆಳಕು ಮತ್ತು ಧ್ವನಿ ಪ್ರದರ್ಶನ ವೀಕ್ಷಿಸಲು ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಇಶಾ ಫೌಂಡೇಷನ್ ಸಂಸ್ಕೃತ ಶಾಲೆ, ಯೋಗ ಕೇಂದ್ರ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳು ಮತ್ತಷ್ಟು ಆಕರ್ಷಣೀಯ ತಾಣವಾಗಿ ಬೆಳವಣಿಗೆ ಕಾಣುತ್ತಿದೆ.
ಚಿಂತಾಮಣಿಯ ಅಂಬಾಜಿ ದುರ್ಗ ಬೆಟ್ಟದ ಸಾಲಿನ ಎತ್ತರದ ಪ್ರದೇಶದಲ್ಲಿ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯವಿದೆ. ಬೆಟ್ಟದ ತುದಿಗೆ ಸಾಗಲು ದಾರಿ ಇದೆ. ಅರಣ್ಯ ಇಲಾಖೆಯ ಕೆಲ ನಿರ್ಬಂಧಗಳೊಂದಿಗೆ ಪ್ರಗತಿ ಕಾಣುತ್ತಿರುವ ಕಾಡು ಮಲ್ಲೇಶ್ವರ ಬೆಟ್ಟವು ವಾರಾಂತ್ಯದಲ್ಲಿ ಜನರು ಕುಟುಂಬದೊಂದಿಗೆ ಬರುವವರಿಗೆ ಪಿಕ್ನಿಕ್ ತಾಣ ವಾಗಿದೆ. ಬೆಟ್ಟದ ತಪ್ಪಲಿನಲ್ಲಿ ಗಿಡ-ಮರ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನದ ಅಗತ್ಯವಿದೆ.