

ಬೆಂಗಳೂರು: ಭಾರತದ ಬೃಹತ್ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಈಗಾಗಲೇ 150 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಮಾತ್ರವಲ್ಲ, ಮೂರನೇ ಅಲೆಯ ಈ ಸಂದರ್ಭದಲ್ಲಿ ಎರಡನೇ ಡೋಸ್ ಪಡೆಯುವವರ ಪ್ರಮಾಣ ಹೆಚ್ಚಾಗಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಎರಡೂ ಡೋಸ್ ತೆಗೆದುಕೊಂಡಿರುವವರು ಬೂಸ್ಟರ್ ಹಾಗೂ ಪ್ರಿಕಾಷನರಿ ಡೋಸ್ ಪಡೆಯಲು ಸಜ್ಜಾಗಿದ್ದಾರೆ.
ಹೀಗಾಗಿ ಎಲ್ಲರಿಗೂ ಲಸಿಕೆ ತ್ವರಿತವಾಗಿ ಸಿಗುವಂತೆ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಆ ನಿಟ್ಟಿನಲ್ಲಿ ಬಹಳಷ್ಟು ಏರ್ಪಾಟುಗಳನ್ನು ಮಾಡುತ್ತಲೇ ಇದೆ. ಪರಿಣಾಮವಾಗಿ ಸಾರ್ವಜನಿಕರಿಗೆ ತಕ್ಷಣಕ್ಕೆ ಲಸಿಕೆ ಕೂಡ ಸಿಗುತ್ತಿದೆ. ಆದರೆ ಕೆಲವರಿಗೆ ಮೂರು ತಿಂಗಳ ಮೇಲಷ್ಟೇ ಲಸಿಕೆ ಸಿಗಲಿದೆ. ಈ ಬಗ್ಗೆ ಸರ್ಕಾರವೇ ನಿಯಮ ಹೊರಡಿಸಿದೆ.
ಅದೇನೆಂದರೆ ಕರೊನಾ ಸೋಂಕು ಹೊಂದಿದ ವ್ಯಕ್ತಿಗಳು ಗುಣಮುಖರಾದ 3 ತಿಂಗಳ ನಂತರವಷ್ಟೇ ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಕೋವಿಡ್-19 ಲಸಿಕೆ ನೀಡಿಕೆಗಾಗಿ ರಾಷ್ಟ್ರೀಯ ತಜ್ಞರ ಗುಂಪು (ಎನ್ಇಜಿವಿಎಸಿ) ಶಿಫಾರಸ್ಸಿನ ಮೇರೆಗೆ ಸರ್ಕಾರ ಈ ನಿರ್ದೇಶನ ನೀಡಿದೆ. ವಿಶೇಷವೆಂದರೆ ಇದು ಎರಡನೇ ಡೋಸ್ ಹಾಗೂ ಮುನ್ನೆಚ್ಚರಿಕೆ ಡೋಸ್ ಪಡೆಯಬೇಕಿರುವ ಎಲ್ಲ ಅರ್ಹ ಫಲಾನುಭವಿಗಳಿಗೂ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳಿದೆ.
ಇನ್ನು ಕೋವಿನ್ ಆ್ಯಪ್ನಲ್ಲಿ ಇದುವರೆಗೆ ಒಂದು ಮೊಬೈಲ್ಫೋನ್ ನಂಬರ್ನಿಂದ ನಾಲ್ಕು ಮಂದಿ ಲಸಿಕೆ ಪಡೆಯಬಹುದಿತ್ತು. ಇದೀಗ ಒಂದೇ ನಂಬರ್ ನೀಡಿ ಆರು ಜನರು ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾತ್ರವಲ್ಲ ಸಾರ್ವಜನಿಕರು ತಮ್ಮ ಲಸಿಕೆಯ ಸ್ಟೇಟಸ್ ತಿದ್ದುಪಡಿ ಮಾಡಿಕೊಳ್ಳುವ ಅವಕಾಶವನ್ನೂ ಆ್ಯಪ್ನಲ್ಲಿ ನೀಡಲಾಗಿದೆ.