

Zodiac Signs : ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಮಹಿಳೆಯರು ಅತ್ಯುತ್ತಮ ಸಹೋದರಿಯರಾಗುವ ಗುಣಗಳೊಂದಿಗೆ ಜನಿಸುತ್ತಾರೆ. ಈ ಮಹಿಳೆಯರು ಸಹೋದರಿಯರಾಗಿ ತಮ್ಮ ಕರ್ತವ್ಯಗಳನ್ನು ಉತ್ತಮವಾಗಿ ಪೂರೈಸುತ್ತಾರೆ. ಹಾಗಾದರೆ, ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮಿಥುನ ರಾಶಿಯಲ್ಲಿ ಜನಿಸಿದ ಮಹಿಳೆಯರು ಉತ್ತಮ ಸಹೋದರಿಯರು ಎಂದು ಹೇಳಲಾಗಿದೆ. ಅವರು ಹರ್ಷಚಿತ್ತದಿಂದ ಯಾವಾಗಲೂ ತಮ್ಮ ಸಹೋದರರ ಮಾತನ್ನು ಕೇಳಲು ಮತ್ತು ಜೀವನದ ಬಗ್ಗೆ ಸಲಹೆ ನೀಡಲು ಸಿದ್ಧರಿರುತ್ತಾರೆ. ನಿಮ್ಮ ಜೀವನ ಎಷ್ಟೇ ಕಷ್ಟಕರವೆಂದು ತೋರಿದರೂ, ಈ ರಾಶಿಯ ಸಹೋದರಿಯರು ಜೀವನವನ್ನು ಎದುರಿಸಲು ಮತ್ತು ನೀವು ಮುಂದುವರಿಯಲು ಸಹಾಯ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಮಹಿಳೆಯರು ದ್ವಂದ್ವ ಸ್ವಭಾವವನ್ನು ಹೊಂದಿದ್ದರೂ, ಸಹೋದರಿಯಾಗಿ ತಮ್ಮ ಕರ್ತವ್ಯಗಳಿಂದ ಎಂದಿಗೂ ದೂರ ಸರಿಯುವುದಿಲ್ಲ.
ಕರ್ಕಾಟಕ ರಾಶಿಯ ಮಹಿಳೆಯರು ಕೂಡ ಸಹೋದರಿ ಸ್ಥಾನ ತುಂಬುವುದರಲ್ಲಿ ಒಂದು ಕೈ ಮೇಲಿರುತ್ತಾರೆ. ಈ ರಾಶಿಯ ಮಹಿಳೆಯರು ನಿಮಗಿಂತ ಚಿಕ್ಕವರಾಗಿರಲಿ ಅಥವಾ ದೊಡ್ಡವರಾಗಿರಲಿ, ನಿಮಗೆ ಅತ್ಯುತ್ತಮವಾದದ್ದನ್ನು ನೀಡುತ್ತಾರೆ. ಈ ರಾಶಿಯ ಮಹಿಳೆಯರು ಯಾವುದೇ ನಿರೀಕ್ಷೆಗಳಿಲ್ಲದೆ ತಮ್ಮ ಸಹೋದರ- ಸಹೋದರಿಯರಿಗೆ ನಿಜವಾದ ಪ್ರೀತಿಯನ್ನು ನೀಡುತ್ತಾರೆ. ಈ ರಾಶಿಚಕ್ರದ ಮಹಿಳೆಯರು ಸಹೋದರಿಯರಾಗಿ ವಿಶೇಷವಾಗಿ ಒಳ್ಳೆಯವರು ಮತ್ತು ತುಂಬಾ ದಾನಶೀಲರು.
ತುಲಾ ರಾಶಿಯ ಸಹೋದರಿಯರು ಉತ್ತಮ ಸಮತೋಲನದ ಮನಸ್ಸನ್ನು ಹೊಂದಿರುತ್ತಾರೆ. ಅವರು ತಮ್ಮ ಸಹೋದರರನ್ನು ಕಠಿಣ ಸಂದರ್ಭಗಳಲ್ಲಿ ಬೆಂಬಲಿಸುವುದಲ್ಲದೆ, ಅವರಿಗೆ ಆತ್ಮಾವಲೋಕನದ ಕಲೆಯನ್ನು ಕಲಿಸುತ್ತಾರೆ. ಆದಾಗ್ಯೂ, ತಮ್ಮ ಒಡಹುಟ್ಟಿದವರು ತಪ್ಪುಗಳನ್ನು ಮಾಡಿದಾಗ ಅವರು ದೂಷಿಸುವುದಿಲ್ಲ, ಬದಲಿಗೆ ಅವರಿಗೆ ಧೈರ್ಯ ತುಂಬಿ, ತಪ್ಪುಗಳು ಅರಿವಾಗುವಂತೆ ಮಾಡುತ್ತಾರೆ. ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ಸಹೋದರಿ ಇರುವುದು ಒಂದು ಆಶೀರ್ವಾದ. ಅವರು ಯಾವುದೇ ಸಂದರ್ಭದಲ್ಲೂ ತಮ್ಮ ಒಡಹುಟ್ಟಿದವರನ್ನು ಇತರರಿಗಾಗಿ ಬಿಟ್ಟುಕೊಡುವುದಿಲ್ಲ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.