ಮಕ್ಕಳ ಮಿದುಳಿನ ಬೆಳವಣಿಗೆಗೆ ಈ ಪೋಷಕಾಂಶಗಳು ಬೇಕೇ ಬೇಕು

ವಿಜಯವಾಣಿ-2-3
Published on
ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಮಧ್ಯಂತರ ಪರೀಕ್ಷೆ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಮಕ್ಕಳ ಮಿದುಳಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಮಿದುಳಿನ ಆರೋಗ್ಯವನ್ನು ಕಾಪಾಡಲು ಕೊಡಲೇಬೇಕಾದ ಅತಿ ಮುಖ್ಯವಾದ 8 ಪೋಷಕಾಂಶಗಳ ಬಗ್ಗೆ ತಿಳಿದುಕೊಳ್ಳೋಣ.

ವಿಟಮಿನ್ ಬಿ12 - ನಮ್ಮ ನರಗಳ ಆರೋಗ್ಯಕ್ಕೆ ಇದು ಬೇಕೇ ಬೇಕು. ಇದರ ಸೇವನೆ ಸರಿಯಾಗಿ ಆಗದೇ ಹೋದರೆ ನರಗಳ ಆರೋಗ್ಯ ಹಾಳಾಯಿತೆಂದೇ ಅರ್ಥ. ಇದರ ಕೊರತೆ ಇದ್ದಾಗ ಕೈ ಕಾಲು ಜೋಮು, ಮರೆವು ಮುಂತಾದ ತೊಂದರೆಗಳು ಉಂಟಾಗುತ್ತವೆ. ಮಾಂಸಾಹಾರಿಗಳಿಗೆ ಸುಲಭವಾಗಿ ಮಾಂಸ ಸೇವನೆಯಲ್ಲಿ ಇದು ಲಭ್ಯವಾಗುತ್ತದೆ. ಸಸ್ಯಾಹಾರಿಗಳು ಹಾಲು ಮತ್ತು ಮೊಸರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಇದು ಸಿಗಲು ಸಾಧ್ಯ.

ಒಮೆಗಾ 3 - ಇದರಲ್ಲಿರುವ ಡಿಎಚ್​ಎ ಮಕ್ಕಳ ಮಿದುಳಿನ ಬೆಳವಣಿಗೆಗೆ ತುಂಬಾ ಅವಶ್ಯಕ. ಹಾಗಾಗಿ ಮಾಂಸಾಹಾರಿಗಳು ಮೀನನ್ನು ಹೆಚ್ಚಾಗಿ ಸೇವಿಸಬೇಕು. ಏಕೆಂದರೆ ಇದರಲ್ಲಿ ಯಥೇಚ್ಛವಾಗಿ ಒಮೆಗಾ ತ್ರೀ ಲಭ್ಯವಿರುತ್ತದೆ. ಸಸ್ಯಾಹಾರಿಗಳು ಅಗಸೆ ಬೀಜ, ಬಸಳೆ ಸೊಪ್ಪು ಮುಂತಾದವುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.

ವಿಟಮಿನ್ ಬಿ ಸಿಕ್ಸ್ - ಡೊಪಮೀನ್, ಸೆರಟೋನಿನ್, ಗಾಬಾ ಮುಂತಾದ ಮುಖ್ಯವಾದ ನರಸಂವಾಹಕಗಳ ಉತ್ಪಾದನೆ ಯಲ್ಲಿ ಇದರ ಅವಶ್ಯಕತೆ ಇರುತ್ತದೆ. ಇದು ವಿಶೇಷವಾಗಿ ದೇಶಿ ತಳಿಯ ಆಕಳ ಹಾಲು, ಬೂದುಗುಂಬಳ, ಬಸಳೆ ಸೊಪ್ಪು ಮುಂತಾದವುಗಳಲ್ಲಿ ಲಭ್ಯವಿರುತ್ತದೆ.

ಮೆಗ್ನೀಸಿಯಂ - ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಕ್ಕಳಲ್ಲಿ ಕಂಡುಬರುವ ಒತ್ತಡ, ಗಾಬರಿಗಳನ್ನು ತಡೆಯುತ್ತದೆ. ಮೂರ್ಛೆರೋಗದಲ್ಲಿ ಕೂಡ ಇದು ಅನುಕೂಲಕರ. ಇದು ಕುಂಬಳ ಬೀಜ, ಬಾದಾಮಿ, ಗೋಡಂಬಿ, ವಾಲ್ನಟ್ ಮುಂತಾದ ನಟ್​ಗಳು ಮತ್ತು ಡಾರ್ಕ್ ಚಾಕಲೇಟ್​ಗಳಲ್ಲಿ ಸಿಗುತ್ತದೆ.

ಜಿಂಕ್- ಮಿದುಳಿಗೆ ಆಮ್ಲಜನಕದ ಕೊರತೆಯ ಕಾರಣದಿಂದ ಆಗುವ ತೊಂದರೆಗಳನ್ನು ಸರಿಪಡಿಸಲು ಜಿಂಕ್ ಆವಶ್ಯಕ. ಇದು ಕುಂಬಳ ಬೀಜ, ಬೂದುಗುಂಬಳ ಕಾಯಿ, ಎಳ್ಳು, ಹೊರಪದರ ಇರುವಂತಹ ಅಂದರೆ ಪಾಲಿಷ್ ಮಾಡದ ಧಾನ್ಯಗಳಲ್ಲಿ ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತದೆ.

ವಿಟಮಿನ್ ಬಿ2 - ಇದು ಮಿದುಳು ಹಾಳಾಗುವುದನ್ನು ತಪ್ಪಿಸುತ್ತದೆ. ಜತೆಗೆ ನರಗಳ ರಕ್ಷಣೆಯನ್ನು ಮಾಡುತ್ತದೆ. ಹಾಗಾಗಿ ನೆನಪಿನ ಶಕ್ತಿಯನ್ನು ಕಾಪಾಡುತ್ತದೆ. ಇದು ಮಾಂಸಾಹಾರಿಗಳಿಗೆ ಮೀನು ಮತ್ತು ಮಾಂಸಗಳಲ್ಲಿ, ಸಸ್ಯಹಾರಿಗಳಿಗೆ ದೇಸಿ ತಳಿಯ ಆಕಳ ಹಾಲು, ಪಾಲಕ್ ಸೊಪ್ಪು, ಕೇಸರಿಯಂತಹ ಪದಾರ್ಥಗಳಲ್ಲಿ ಸಿಗುತ್ತದೆ.

ಒಳ್ಳೆಯ ಕೊಬ್ಬು - ಸರಿಯಾದ ರೀತಿಯಲ್ಲಿ ಒಳ್ಳೆಯ ಕೊಬ್ಬನ್ನು ಸೇವಿಸಿದರೆ ಮಾತ್ರ ಮಿದುಳಿನ ಆರೋಗ್ಯ ಚೆನ್ನಾಗಿರಲು ಸಾಧ್ಯ. ತುಪ್ಪ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಮುಂತಾದವುಗಳ ಸರಿಯಾದ ಪ್ರಮಾಣದ ಸೇವನೆಯಿಂದ ಮಿದುಳಿನ ಆರೋಗ್ಯ ಖಂಡಿತ ಹೆಚ್ಚುತ್ತದೆ.

ವಿಟಮಿನ್ ಸಿ - ಅತ್ಯುತ್ತಮವಾದ ಆಂಟಿ ಆಕ್ಸಿಡೆಂಟ್ ಆಗಿರುವ ವಿಟಮಿನ್ ಸಿ ಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮಿದುಳು ಮುಪ್ಪಾಗುವುದು ದೂರವಾಗು ತ್ತದೆ. ಜೊತೆಗೆ ನರಗಳ ಬೆಳವಣಿಗೆ ಸರಿಯಾಗಿ ಆಗಲು ಮತ್ತು ಒಂದು ನರ ಇನ್ನೊಂದು ನರಕ್ಕೆ ಸರಿಯಾದ ರೀತಿಯಲ್ಲಿ ಸಂವೇದನೆಗಳನ್ನು ಹಂಚಿ ಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ಎಲ್ಲಾ ಹುಳಿ ಹಣ್ಣುಗಳು ಉದಾಹರಣೆಗೆ ಕಿತ್ತಳೆ, ಮೂಸಂಬಿ, ಕಿವಿ ಹಣ್ಣು, ನೆಲ್ಲಿಕಾಯಿ ಮುಂತಾದವುಗಳಲ್ಲಿ ಇದು ಚೆನ್ನಾಗಿ ಲಭ್ಯವಿದೆ.

ಇಂತಹ ಆಹಾರ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಿದರೆ ಮಕ್ಕಳ ಮಿದುಳು ಶಕ್ತಿಯನ್ನು ಪಡೆದು ಕೆಲವೇ ದಿನಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ನಾವು ಕಾಣಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net