

ಪಟನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು; ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ) ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಶೇ. 65ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರವು ನಿಗದಿಪಡಿಸಿರುವ 10 ಪ್ರತಿಶತ ಮೀಸಲಾತಿಯು ಸೇರಿದರೆ ಒಟ್ಟು ಮೀಸಲಾತಿಯ ಪ್ರಮಾಣವು ಈ ಮೂಲಕ ಶೇಕಡಾ 75ರಷ್ಟಾಗುತ್ತದೆ. ಆದರೆ ನಿತೀಶ್ ಪ್ರಸ್ತಾಪಿಸಿರುವ ಮೀಸಲಾತಿ ಪರಿಷ್ಕರಣೆಗಳು 1992ರಲ್ಲಿ ಸುಪ್ರೀಂ ಕೋರ್ಟ್ ನಿಗದಿಪಡಿಸಿದ 50 ಪ್ರತಿಶತ ಮಿತಿಯನ್ನು ಮೀರುತ್ತದೆ.
‘ಸೂಕ್ತ ಸಮಾಲೋಚನೆಯ ನಂತರ ನಾವು ಕ್ರಮ ಕೈಗೊಳ್ಳುತ್ತೇವೆ. ಪ್ರಸ್ತುತ ಅಧಿವೇಶನದಲ್ಲಿ ಈ ಬದಲಾವಣೆಗಳನ್ನು ಜಾರಿಗೆ ತರುವುದು ನಮ್ಮ ಉದ್ದೇಶವಾಗಿದೆ’ ಎಂದು ನಿತೀಶ್ಕುಮಾರ್ ಹೇಳಿದ್ದಾರೆ. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮಹಿಳೆಯರಿಗೆ ಶೇಕಡಾ ಮೂರರಷ್ಟು ಮೀಸಲಾತಿ ರದ್ದುಗೊಳಿಸುವುದು ಕೂಡ ಇದರಲ್ಲಿ ಸೇರಿದೆ.
ಆಡಳಿತಾರೂಢ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಜೋಡಿಯು ಯಾದವ ಮತ್ತು ಮುಸ್ಲಿಂ ಸಮುದಾಯಗಳಿಗೆ ಸಂಬಂಧಿಸಿದ ಅಂಕಿ-ಸಂಖ್ಯೆಗಳನ್ನು ಹೆಚ್ಚಿಸಿದೆ ಎಂಬ ವಿರೋಧ ಪಕ್ಷ ಬಿಜೆಪಿಯ ಆಕ್ಷೇಪದ ನಡುವೆಯೇ ವಿವಾದಾತ್ಮಕ ಜಾತಿ ಸಮೀಕ್ಷೆಯ ಸಂಪೂರ್ಣ ವರದಿಯನ್ನು ಬಿಹಾರ ವಿಧಾನಸಭೆಯ ಮುಂದೆ ಮಂಡಿಸಲಾಗಿದೆ. ಇದಾದ ಕೆಲವೇ ಗಂಟೆಗಳ ನಂತರ ಮೀಸಲಾತಿ ಹೆಚ್ಚಿಸುವ ಈ ಪ್ರಸ್ತಾವವನ್ನು ನಿತೀಶ್ಕುಮಾರ್ ಮಾಡಿದ್ದಾರೆ.
ಸಾಮಾನ್ಯ ವರ್ಗಕ್ಕೆ ಕೇವಲ 25 ಪ್ರತಿಶತ: ಒಂದು ವೇಳೆ ನಿತೀಶ್ ಕುಮಾರ್ ಪ್ರಸ್ತಾಪ ಮಾಡಿರುವ ಮೀಸಲಾತಿ ಪ್ರಸ್ತಾವನೆ ಜಾರಿಗೆ ಬಂದರೆ, ಮೀಸಲು ರಹಿತ ಸಾಮಾನ್ಯ ವರ್ಗಕ್ಕೆ ಕೇವಲ 25 ಪ್ರತಿಶತ ಸೀಟುಗಳು ಉಳಿಯುತ್ತವೆ. ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟು ಶೇ. 65 ಮೀಸಲಾತಿ ನೀಡಲಾಗುತ್ತದೆ. ದುರ್ಬಲ ಆರ್ಥಿಕ ವರ್ಗಕ್ಕೆ ಶೇ. 10 ಪ್ರತ್ಯೇಕ ಮೀಸಲಾತಿ ಸೇರಿದರೆ ಒಟ್ಟು ಮೀಸಲಾತಿ ಪ್ರಮಾಣ ಶೇ. 75 ಆಗಲಿದೆ.
ಯಾದವರ ಸಂಖ್ಯೆ ಅತಿಹೆಚ್ಚು: ಒಬಿಸಿಗಳಲ್ಲಿ ಯಾದವ ಸಮುದಾಯವು ಅತಿ ದೊಡ್ಡ ಗುಂಪಾಗಿದ್ದು, ಇವರು ಜನಸಂಖ್ಯೆಯ ಶೇಕಡಾ 14.27 ರಷ್ಟಿದ್ದಾರೆ. ರಾಜ್ಯದ 13.1 ಕೋಟಿ ಜನರಲ್ಲಿ 36 ಪ್ರತಿಶತದಷ್ಟು ಜನರು ಇಬಿಸಿಗಳಿದ್ದರೆ, ಶೇಕಡಾ 27.1ರಷ್ಟು ಒಬಿಸಿಗಳಿದ್ದಾರೆ. 19.7 ಪ್ರತಿಶತದಷ್ಟು ಪರಿಶಿಷ್ಟ ಜಾತಿ ಜನರಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿದವರು ಶೇ.1.7 ರಷ್ಟಿದ್ದಾರೆ. ಸಾಮಾನ್ಯ ವರ್ಗಕ್ಕೆ ಸೇರಿದವರು ಶೇ.15.5ರಷ್ಟಿದ್ದಾರೆ.
ಹೀಗಿದೆ ಕೋಟಾ ವಿವರ: ಬಿಹಾರದಲ್ಲಿ ಪ್ರಸ್ತಾವಿತ ಪರಿಷ್ಕೃತ ಕೋಟಾದ ಅಡಿಯಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಶೇಕಡಾ 20 ರಷ್ಟು ಮೀಸಲಾತಿ ಪಡೆಯಲಿದ್ದಾರೆ. ಪರಿಶಿಷ್ಟ ಜಾತಿಯ ಮೀಸಲನ್ನು ಈಗಿರುವ ಶೇಕಡಾ 16ರಿಂದ 18ಕ್ಕೆ ಹೆಚ್ಚಿಸಲಾಗುತ್ತಿದೆ. ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಪ್ರಸ್ತುತ ಇರುವ ಶೇಕಡಾ 1ರಿಂದ ಶೇಕಡಾ 2ಕ್ಕೆ ಏರಿಸಲಾಗುತ್ತದೆ. ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮತ್ತು ಅತ್ಯಂತ ಹಿಂದುಳಿದ ವರ್ಗಗಳಿಗೆ (ಇಬಿಸಿ) ಶೇಕಡಾ 43ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಹಿಂದೆ ಒಬಿಸಿಗಳಿಗೆ ಶೇಕಡಾ 12 ಹಾಗೂ ಇಬಿಸಿಗಳಿಗೆ ಶೇಕಡಾ 18ರಷ್ಟು ಮೀಸಲಾತಿ ಸೇರಿ ಈ ಎರಡೂ ವರ್ಗಗಳಿಗೆ ಶೇಕಡಾ 30ರಷ್ಟು ಮೀಸಲಾತಿ ಇತ್ತು.
ಬಿಹಾರದಲ್ಲಿ ವಾಸಿಸುವ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಕುಟುಂಬಗಳು ಬಡತನದಲ್ಲಿ ವಾಸಿಸುತ್ತಿದ್ದು, ಮಾಸಿಕ 6,000 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿವೆ. ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಜಾತಿ ಸಮೀಕ್ಷೆಯ ವಿವರವಾದ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಈ ವರದಿಯು ಮೇಲ್ಜಾತಿಗಳಲ್ಲಿ ಬಡತನ ಇದ್ದರೂ, ಇದರ ಶೇಕಡಾವಾರು ಪ್ರಮಾಣವು ಹಿಂದುಳಿದ ವರ್ಗಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಲ್ಲಿ ಹೆಚ್ಚಿದೆ ಎಂದು ಹೇಳಿದೆ. ಸಂಸ ದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಅವರು ಮಂಡಿಸಿದ ವರದಿಯ ಪ್ರಕಾರ, ರಾಜ್ಯವು ಅಂದಾಜು 2.97 ಕೋಟಿ ಕುಟುಂಬಗಳಿಗೆ ನೆಲೆಯಾಗಿದೆ. ಇದರಲ್ಲಿ 94 ಲಕ್ಷಕ್ಕೂ ಹೆಚ್ಚು (ಶೇಕಡಾ 34.13) ಬಡವರು ಇದ್ದಾರೆ. ಮತ್ತೊಂದು ಪ್ರಮುಖ ಸಂಶೋಧನೆಯೆಂದರೆ, 50 ಲಕ್ಷಕ್ಕೂ ಹೆಚ್ಚು ಬಿಹಾರಿಗಳು ಜೀವನೋಪಾಯ ಅಥವಾ ಉತ್ತಮ ಶಿಕ್ಷಣದ ಅವಕಾಶಗಳ ಹುಡುಕಾಟದಲ್ಲಿ ರಾಜ್ಯದ ಹೊರಗೆ ವಾಸಿಸುತ್ತಿದ್ದಾರೆ. ಇತರ ರಾಜ್ಯಗಳಲ್ಲಿ ಜೀವನ ಸಾಗಿಸುತ್ತಿರುವವರು ಅಂದಾಜು 46 ಲಕ್ಷದಷ್ಟಿದ್ದರೆ, 2.17 ಲಕ್ಷ ಜನರು ವಿದೇಶದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬೇರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಅಂದಾಜು 5.52 ಲಕ್ಷದಷ್ಟಿದ್ದರೆ, 27,000 ಮಂದಿ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.