

ಶೃಂಗೇರಿ: ತಾಲೂಕಿನ ವಿದ್ಯಾರಣ್ಯಪುರ ಗ್ರಾಪಂನಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿ ಇಲ್ಲದೆ ಜನರು ಪರದಾಡುವಂತಾಗಿದೆ. ಸಾರ್ವಜನಿಕ ಕೆಲಸಗಳು ಸಂಪೂರ್ಣ ನಿಂತುಹೋಗಿವೆ. ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಹಾಗಾಗಿ ಕೂಡಲೇ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಆಗ್ರಹಿಸಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಕಚೇರಿಯ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಪಂ ವ್ಯಾಪ್ತಿ ಭೌಗೋಳಿಕವಾಗಿ ತಾಲೂಕಿನಲ್ಲಿ ಬಲು ದೊಡ್ಡದು. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಸೂಚಿಸುವ ಅಧಿಕಾರಿಗಳು ಇರದ ಕಾರಣ ತೊಂದರೆ ಆಗುತ್ತಿದೆ. ಇಲ್ಲಿಗೆ ಬರುವ ಅಧಿಕಾರಿಗಳು ಪ್ರಭಾರಿಯಾಗಿ ಕೆಲವು ತಿಂಗಳ ಕಾಲ ಕೆಲಸ ಮಾಡಿ ಮತ್ತೊಂದೆಡೆ ನಿಯುಕ್ತಿ ಆಗುತ್ತಿದ್ದಾರೆ. ಇದರಿಂದ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಉತ್ತರ ನೀಡಲು ಕಷ್ಟವಾಗಿದೆ ಎಂದು ಗ್ರಾಪಂ ಸದಸ್ಯ ಪ್ರವೀಣ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ಸುನೀತಾ ವಾಸು, ನಾಗರಾಜ್, ಮಮತಾ, ಲಲಿತಾ, ಪದ್ಮಾ ಮಂಜೇಶ್, ವಿಜಯಾ ತಿಪ್ಪರಮಕ್ಕಿ, ಮಂಜುನಾಥ್, ಗ್ರಾಪಂ ನೌಕರ ರವಿ ಇತರರಿದ್ದರು.