ಲಾಕ್​ಡೌನ್ ಅವಶ್ಯಕತೆ ಇಲ್ಲ: ಸಚಿವ ಸುಧಾಕರ್

Sudhakar 10 March 20
Published on

ಬೆಂಗಳೂರು: ಸೋಂಕು ಅಧಿಕವಾಗಿರುವ ಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸೀಲ್​ಡೌನ್ ಮಾಡಲು ಸಿಎಂ ಸೂಚನೆ ನೀಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಸಿಎಂ ನೇತೃತ್ವದಲ್ಲಿ ಶನಿವಾರ ನಡೆದ ಟಾಸ್ಕ್​ಫೋರ್ಸ್ ಸಭೆ ಬಳಿಕ ಸುದ್ದಿಗಾರರಿಗೆ ವಿವರ ನೀಡಿದರು. ಸಚಿವರು, ಅಧಿಕಾರಿಗಳು, ವೈದ್ಯರು ಮತ್ತು ಎಲ್ಲ ಸಿಬ್ಬಂದಿ ಪರಿಶ್ರಮದಿಂದ ರಾಜ್ಯದಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಆದರೆ, ಇತ್ತೀಚೆಗೆ ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಇನ್ನಷ್ಟು ಪರಿಶ್ರಮದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ ಎಂದರು.

ಟಾಸ್ಕ್​ಫೋರ್ಸ್ ಸಭೆಯಲ್ಲಿ ಲಾಕ್​ಡೌನ್ ವಿಚಾರವು ಚರ್ಚೆಗೆ ಬಂತು. ಈ ಸನ್ನಿವೇಶದಲ್ಲಿ ಲಾಕ್​ಡೌನ್ ಬೇಕಿಲ್ಲ ಎಂದು ನಾನು ಮತ್ತು ಡಿಸಿಎಂ ಅಶ್ವತ್ಥನಾರಾಯಣ ಮನವರಿಕೆ ಮಾಡಿಕೊಟ್ಟಿದ್ದೇವೆ. ಮುಂದೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಪ್ರಕಟಿಸಿದ್ದಂತೆ ಭಾನುವಾರ ಮತ್ತು ರಾತ್ರಿ ಕರ್ಫ್ಯೂ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದು ತಿಳಿಸಿದರು.

ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಆರ್. ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಟೆಲಿ ಮೆಡಿಸಿನ್ ಕಾರ್ಟ್​ಗೆ ಚಾಲನೆ

ಸಭೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸಿಸ್ಕೊ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅಡಿ ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಡುಗೆ ನೀಡಿರುವ ‘ಟೆಲಿ ಮೆಡಿಸಿನ್ ಕಾರ್ಟ್’ಗೆ ಸುಧಾಕರ್ ಚಾಲನೆ ನೀಡಿದರು. ಕೋವಿಡ್

ರೋಗಿಗಳಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿ ಸರ್ಕಾರ ಅತ್ಯುತ್ತಮ ತಂತ್ರಜ್ಞಾನ ಬಳಕೆ ಮಾಡುತ್ತಿದೆ. ಟೆಲಿ ಮೆಡಿಸನ್ ಕಾರ್ಟ್ ಅಳವಡಿಕೆಯಿಂದ ರೋಗಿಗಳ ಚಿಕಿತ್ಸೆಗೆ ಮಾರ್ಗದರ್ಶನ ಮಾಡುವುದಲ್ಲದೆ ಅವರ ಎಲ್ಲ ದಾಖಲೆ ಮತ್ತು ಮಾಹಿತಿಗಳ ನಿರ್ವಹಣೆ ಮಾಡಬಹು ದಾಗಿದೆ. ಹಿರಿಯ ವೈದ್ಯರು ಮತ್ತು ತಜ್ಞರು ವಾರ್ಡ್​ಗಳಿಗೆ ಭೇಟಿ ನೀಡದೆ ರೋಗಿಯನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು. ಸಿಸ್ಕೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡೈಸಿ ಡಿವ್ಯಾಸಿ ಚಿಟಿಲಪಲ್ಲಿ ಉಪಸ್ಥಿತರಿದ್ದರು. ವಿಡಿಯೋ ಕಾನ್ಪರೆನ್ಸ್ ಮೂಲಕ ಬಿಎಂಸಿಐ ನಿರ್ದೇಶಕಿ ಡಾ. ಜಯಂತಿ, ಮೆಡಿಸನ್ ವಿಭಾಗದ ಮುಖ್ಯಸ್ಥ ಡಾ. ಕೆ. ರವಿ, ಡಾ. ಅವಿನಾಶ್ ಮತ್ತು ಡಾ. ರಮೇಶ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net