More

    ಗುಡ್​ಬೈ ಬೆಂಗಳೂರು: ಕರೊನಾಗೆ ಹೆದರಿ ಪಾತ್ರೆಪಗಡೆ ಸಮೇತ ಊರು ಬಿಟ್ಟ ಜನ

    ಬೆಂಗಳೂರು: ಕರೊನಾ ಮಹಾಮಾರಿ ರಾಜಧಾನಿ ಬೆಂಗಳೂರಿನಲ್ಲಿ ವಿಪರೀತ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಊರಿನತ್ತ ಜನರ ಗುಳೇ ಶುರುವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಅಧಿಕೃತವಾಗಿ ಮುಗಿದ ಬಳಿಕ ಮತ್ತೊಮ್ಮೆ ಲಾಕ್​ಡೌನ್ ಜಾರಿಯಾಗಬಹುದೆಂಬ ಕಾರಣಕ್ಕೆ ಶನಿವಾರ ಸಾವಿರಾರು ಜನರು ಪಾತ್ರೆ, ಪಗಡೆ ಸಮೇತ ಮನೆಗಳನ್ನು ಖಾಲಿ ಮಾಡಿಕೊಂಡು ಬೆಂಗಳೂರು ತೊರೆದಿದ್ದಾರೆ. ಕೆಲವರು ತಾತ್ಕಾಲಿಕವಾಗಿ ಊರು ಬಿಟ್ಟರೆ ಇನ್ನೂ ಅನೇಕರು ವಾಹನದಲ್ಲಿ ಸಾಮಾನು ಸರಂಜಾಮು ತುಂಬಿಕೊಂಡು ಶಾಶ್ವತವಾಗಿ ಹಿಂದಿರುಗುತ್ತಿದ್ದಾರೆ. ರಾಜ್ಯದ ಆರ್ಥಿಕ ಕೇಂದ್ರವಾಗಿರುವ ಬೆಂಗಳೂರಿನಲ್ಲಿ 1.2 ಕೋಟಿಗಿಂತಲೂ ಹೆಚ್ಚಿನ ಜನರು ಜೀವನ ಕಂಡುಕೊಂಡಿದ್ದಾರೆ.ಈಗ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಕೆಲವರು ಸ್ವಯಂ ಲಾಕ್​ಡೌನ್ ಮೊರೆಹೋದರೆ, ಇನ್ನೂ ಹಲವರು ಜೀವ ಉಳಿಸಿಕೊಂಡರೆ ಸಾಕೆಂಬ ಕಾರಣದಿಂದ ತಮ್ಮ ಹುಟ್ಟೂರಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

    ಬಾಡಿಗೆ ಕಟ್ಟಿ ಲಗೇಜು ಒಯ್ದರು: ಲಾಕ್​ಡೌನ್ ಘೊಷಣೆ ಆಗುತ್ತಿದ್ದಂತೆಯೇ ಊರಿಗೆ ತೆರಳಿದ್ದ ಜನರು ಲಾಕ್​ಡೌನ್ ಸಡಿಲಿಕೆ ನಂತರ ಹಿಂದಿರುಗಿದ್ದರು. ಈಗ ಸೋಂಕು ಹೆಚ್ಚಾದ್ದರಿಂದ ಶಾಶ್ವತವಾಗಿ ಬೆಂಗಳೂರು ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ತಾವು ನೀಡಿದ್ದ ಮುಂಗಡದ ಪಾವತಿಯಲ್ಲಿ ಮೂರ್ನಾಲ್ಕು ತಿಂಗಳ ಬಾಡಿಗೆ ಕಟ್ಟಿ ಉಳಿದ ಹಣ ವಾಪಸ್ ಪಡೆದುಕೊಂಡಿದ್ದಾರೆ. ಮನೆಯಲ್ಲಿದ್ದ ಸಾಮಗ್ರಿಗಳನ್ನು ಮಿನಿಲಾರಿಗಳಲ್ಲಿ ತುಂಬಿ ಕೊಂಡು ಊರುಗಳತ್ತ ಹೋಗುತ್ತಿದ್ದಾರೆ. ‘ನಮ್ಮ ಮನೆಯಲ್ಲಿ ವಾಸವಿದ್ದ ಉತ್ತರ ಕರ್ನಾಟಕದ ಎರಡು ಕುಟುಂಬಗಳವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ’ ಎಂದು ಮನೆ ಮಾಲೀಕ ರಾಜಾನುಕುಂಟೆ ರಾಜಣ್ಣ ವಿಜಯವಾಣಿಗೆ ತಿಳಿಸಿದ್ದಾರೆ. ಆಷಾಢಕ್ಕೂ ಮೊದಲಿಂದಲೇ ಮನೆ ಖಾಲಿ ಮಾಡುತ್ತಿದ್ದು, ಇದೀಗ ಕಳೆದ ವಾರದಿಂದ ಹೆಚ್ಚಳವಾಗಿದೆ ಎಂದು ಮಿನಿ ಟೆಂಪೊ ಚಾಲಕ ಗಿರೀಶ್ ಹೇಳುತ್ತಾರೆ.

    ಒಬ್ಬಂಟಿಗರಿಗಿಲ್ಲ ದಿಕ್ಕು: ನಗರದಲ್ಲಿ ಒಬ್ಬಂಟಿಗರು (ಅವಿವಾಹಿತರು) ಉದ್ಯೋಗ, ಶಿಕ್ಷಣಕ್ಕಾಗಿ ಸಣ್ಣ ಕೊಠಡಿಗಳು, ಪೇಯಿಂಗ್ ಗೆಸ್ಟ್ನಲ್ಲಿ (ಪಿ.ಜಿ) ನೆಲೆಸಿದ್ದಾರೆ. ಈಗ ಸೋಂಕು ಹೆಚ್ಚಾಗಿ ಹರಡುತ್ತಿರುವ ಕಾರಣ ಒಂದೊಮ್ಮೆ ಸೋಂಕಿಗೆ ತುತ್ತಾದರೆ ಅವರನ್ನು ಆರೈಕೆ ಮಾಡುವವರಿಲ್ಲದಂತಾಗಿದೆ. ಸೋಂಕಿನ ಭಯದಿಂದಾಗಿ ಈ ರೀತಿಯ ಶೇ.60 ಜನರು ಮನೆಗಳು ಹಾಗೂ ಪಿಜಿಗಳನ್ನು ತೊರೆದು ಊರು ಸೇರಿಕೊಂಡಿದ್ದಾರೆ. ಇದರಿಂದಾಗಿ ಸಣ್ಣ ಕೋಣೆ, ಒಂದು ಬೆಡ್​ರೂಂ ಮನೆಗಳು ಖಾಲಿಖಾಲಿಯಾಗಿವೆ. ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮೂರಿನಿಂದಲೇ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ.

    ಟೋಲ್​ಗಳು ಜಾಮ್

    ಭಾನುವಾರದ ರಜಾದಿನ ಹಾಗೂ ಲಾಕ್​ಡೌನ್​ನಿಂದಾಗಿ ತಾತ್ಕಾಲಿಕ ಹಾಗೂ ಶಾಶ್ವತವಾಗಿ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಾದ್ದರಿಂದ ತುಮಕೂರು ರಸ್ತೆ, ಹೊಸೂರು ರಸ್ತೆಗಳ ಟೋಲ್​ಗಳಲ್ಲಿ ಶನಿವಾರ ಸಂಚಾರ ದಟ್ಟಣೆ ಉಂಟಾಗಿತ್ತು. ನಗರದ ಎಲ್ಲ ಬಸ್ ನಿಲ್ದಾಣಗಳಲ್ಲಿ ಬಸ್​ಗಾಗಿ ಕಾಯುತ್ತಿರುವವರ ಸಂಖ್ಯೆಯೂ ಅಧಿಕವಾಗಿತ್ತು. ಬೈಕ್​ಗಳು, ಕಾರುಗಳು, ಬಸ್​ಗಳು, ಮಿನಿ ಲಾರಿಗಳು ಸೇರಿ ಎಲ್ಲ ವಾಹನಗಳು ಭರ್ತಿಯಾಗಿ ಜನರನ್ನು ಒಯ್ಯುತ್ತಿದ್ದ ದೃಶ್ಯಗಳು ಕಂಡುಬಂದವು.

    ಹಳ್ಳಿಗಳಿಗೂ ಸೋಂಕಿನ ಭಯ

    ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಗಳು ಲಾಕ್​ಡೌನ್ ಅವಧಿಯಲ್ಲಿ ನಗರ ಪ್ರದೇಶ ಅಥವಾ ಹೊರ ರಾಜ್ಯಗಳಿಂದ ಯಾರೇ ಬಂದರೂ ಅವರನ್ನು ಕ್ವಾರಂಟೈನ್​ಗೆ ಒಳಪಡಿಸುತ್ತಿದ್ದವು. ಆದರೆ ಈಗ ಮಹಾರಾಷ್ಟ ಬಿಟ್ಟು ಯಾವುದೇ ಪ್ರದೇಶದಿಂದ ಬಂದರೂ ಕ್ವಾರಂಟೈನ್ ಮಾಡಲಾಗುತ್ತಿಲ್ಲ. ಇದೀಗ ರಾಜ್ಯದಲ್ಲಿ ಕಂಡುಬರುತ್ತಿರುವ ಸೋಂಕಿನ ಶೇ.50ಕ್ಕೂ ಹೆಚ್ಚು ಭಾಗ ಬೆಂಗಳೂರಿನಿಂದಲೇ ವರದಿಯಾಗುತ್ತಿದೆ. ಯಾವ ಪ್ರಮಾಣದಲ್ಲಿ ಸಮುದಾಯಕ್ಕೆ ಸೋಂಕು ಹರಡಿದೆ ಎಂಬ ಸ್ಪಷ್ಟತೆ ಇಲ್ಲ. ರಾಜಧಾನಿಯಿಂದ ಗ್ರಾಮೀಣ ಭಾಗಗಳಿಗೆ ತೆರಳುವ ಜನರಿಂದ ಅಲ್ಲಿರುವ ನಿವಾಸಿಗಳಿಗೆ ಸೋಂಕು ಹರಡುವ ಆತಂಕ ಆರಂಭವಾಗಿದೆ. ವಾಪಸಾದವರ ಪರೀಕ್ಷೆ, ನಿಗಾ ಕುರಿತು ಜಿಲ್ಲಾಡಳಿತಗಳು ಎಚ್ಚರಿಕೆ ವಹಿಸಬೇಕಿದೆ.

    5 ಲಕ್ಷ ಕಾರ್ವಿುಕರು ಊರಿಗೆ

    ನಗರದಲ್ಲಿ ಕಟ್ಟಡ ನಿರ್ವಣ, ಗಾರ್ವೆಂಟ್, ಕಾರ್ಖಾನೆಗಳು, ಮಾರುಕಟ್ಟೆ, ವ್ಯಾಪಾರ, ಗೂಡಂಗಡಿ ಹಾಗೂ ವಿವಿಧ ತಾತ್ಕಾಲಿಕ ಕೆಲಸ ಮಾಡುತ್ತಿದ್ದ ಕಾರ್ವಿುಕರು ಸೇರಿ ಒಟ್ಟು 5 ಲಕ್ಷ ಕಾರ್ವಿುಕರು ನಗರ ತೊರೆದಿರುವ ಮಾಹಿತಿಯನ್ನು ಸರ್ಕಾರ ನೀಡಿದೆ. ಸಣ್ಣ ಕುಟುಂಬದಲ್ಲಿ ಒಬ್ಬರಿಗೆ ಸೋಂಕು ಬಂದರೂ ಕುಟುಂಬ ನಿರ್ವಹಣೆ ಹಾಗೂ ಚಿಕಿತ್ಸೆಗೆ ತೀವ್ರ ತೊಂದರೆಯಾಗಲಿದೆ. ಜತೆಗೆ ಸಾವಿರಾರು ಕಾರ್ಖಾನೆ, ಕಂಪನಿ ಹಾಗೂ ಉದ್ಯೋಗ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕರೊನಾ ಸೋಂಕು ತಗುಲಿದಲ್ಲಿ ಯಾವುದೇ ಭದ್ರತೆ ನೀಡಲು ಮುಂದಾಗುತ್ತಿಲ್ಲ.

    ಲಾಕ್​ಡೌನ್ ಅನಿಶ್ಚಿತತೆ

    ರಾಜ್ಯದಲ್ಲಿ ಮಾ.9ರಂದು ಕರೊನಾ ಸೋಂಕು ಕಂಡುಬಂತು. ನಂತರ ಸೋಂಕು ಹರಡುವುದನ್ನು ತಡೆಗಟ್ಟಲು ಮಾ.22 ರಂದು ಜನತಾ ಲಾಕ್​ಡೌನ್ ಘೋಷಿಸಲಾಯಿತು. ಮಾ.24ರಿಂದ ಸರ್ಕಾರವೇ ಅಧಿಕೃತ ಲಾಕ್​ಡೌನ್ ಘೊಷಣೆ ಮಾಡಿತು. ಈ ವೇಳೆ ಉದ್ಯೋಗ, ಆಹಾರಕ್ಕೂ ಪರದಾಡುವಂತಾಗಿತ್ತು. ಇದೀಗ ಪ್ರತಿ ಭಾನುವಾರ ಲಾಕ್​ಡೌನ್ ಜಾರಿ ಮಾಡಲಾಗುತ್ತಿದೆ. ದೀರ್ಘಾವಧಿ ಲಾಕ್​ಡೌನ್ ಹೇರಲು ಇದು ಮುನ್ಸೂಚನೆ ಎಂದು ಭಾವಿಸಿರುವ ಅನೇಕರು, ಮುಂದೆ ಜೀವನ ಕಷ್ಟವಾಗಬಹುದೆಂದು ಹಳ್ಳಿ ಸೇರುತ್ತಿದ್ದಾರೆ.

    ಇನ್ನು ಮುಂದೆ ಪ್ರತಿದಿನವೂ ಹಾಫ್ ಲಾಕ್‌ಡೌನ್ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts