

ಬೆಂಗಳೂರು: ಇಂದು ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh), ಸದ್ಯಕ್ಕೆ ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಆಸೆ, ದುರಾಸೆ ನನ್ನಲ್ಲಿಲ್ಲ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಒಂದಷ್ಟು ಜನರು ನನ್ನನ್ನು ಖುಷಿಪಡಿಸಲು, ಮತ್ತೆ ಕೆಲವರು ಇನ್ನೊಬ್ಬರನ್ನು ಖುಷಿ ಪಡಿಸಲು ಹಾಗೂ ತಮ್ಮ ಅನುಕೂಲಕ್ಕಾಗಿ ಈ ರೀತಿ ಹೆಸರುಗಳನ್ನು ಹೇಳುತ್ತಿರುತ್ತಾರೆ. ನಾನು ಪ್ರಸ್ತುತ ವಿಶ್ರಾಂತಿಯಲ್ಲಿದ್ದೇನೆ. ಜನರು ಕೊಟ್ಟ ತೀರ್ಪನ್ನು ಪ್ರಸಾದ ಎಂದು ಸ್ವೀಕರಿಸಿ ಕೆಲಸ ಮಾಡುವವನು ನಾನು. ಯಾವುದೇ ಸ್ಥಾನ ಸಿಗಬೇಕು ಅಂತಾದರೆ ಸಿಕ್ಕೇ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ. ಯಾವುದೂ ಇಲ್ಲಿ ಸ್ವಂತ ಸ್ವತ್ತಲ್ಲ. ಸಾರ್ವಜನಿಕವಾದ ಹುದ್ದೆಗಳಿವು” ಎಂದು ಒತ್ತಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸರ್ವಪಕ್ಷಗಳ ಹಿರಿಯ ನಾಯಕರಾದ ರಾಜಣ್ಣ ಅವರು ಹೆಚ್ಚು ಶಕ್ತಿ ಇರುವ ನಾಯಕರು. ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಉತ್ತಮವಾಗಿ ಸಂಘಟನೆಯಾಗುತ್ತದೆ ಎನ್ನುವ ವಿಶ್ವಾಸ ಅವರಿಗಿದೆ. ಅವರಿಗೆ ಜನತಾದಳ, ಬಿಜೆಪಿಯವರ ಜತೆ ಒಳ್ಳೆಯ ಸಂಪರ್ಕವಿದೆ. ಅಲ್ಲಿಂದ ಒಂದಷ್ಟು ಜನರನ್ನು ಕರೆದುಕೊಂಡು ಬರಬಹುದು ಎನಿಸುತ್ತದೆ. ಹೀಗಾಗಿ ಅವರು ಪಕ್ಷದ ನೇತೃತ್ವ ವಹಿಸಲು ತುಡಿತದಲ್ಲಿದ್ದಾರೆ. ಅವರಿಗೆ ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಾವು ಸಹಕಾರ ನೀಡಲು ಸಿದ್ಧ” ಎಂದು ತಿಳಿಸಿದರು.
ಚುನಾವಣೆ ದೃಷ್ಟಿಯಿಂದ ಪೂರ್ಣಪ್ರಮಾಣದ ಅಧ್ಯಕ್ಷರ ಅವಶ್ಯಕತೆಯಿದೆಯೇ ಎಂಬ ಪ್ರಶ್ನೆಗೆ, “ಸಂಘಟನೆ ಸೇರಿದಂತೆ ಎಲ್ಲ ರಂಗಗಳಲ್ಲೂ ಕೆಲಸ ಮಾಡುವ ಅವಶ್ಯಕತೆ ಪಕ್ಷಕ್ಕಿದೆ. ಜವಾಬ್ದಾರಿ ಹೊತ್ತುಕೊಳ್ಳಲು ಯಾರೇ ಮುಂದೆ ಬಂದರೂ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ಎಲ್ಲಾ ನಾಯಕರು, ಕಾರ್ಯಕರ್ತರು ಒಪ್ಪಿಕೊಳ್ಳುತ್ತೇವೆ, ಇದರಲ್ಲಿ ಯಾವುದೇ ಅಪಸ್ವರವಿಲ್ಲ” ಎಂದರು.
“ಡಿ.14ರಂದು ಚನ್ನಪಟ್ಟಣದಲ್ಲಿ ಕೃತಜ್ಞತಾ ಸಮಾರಂಭವನ್ನು ಇಟ್ಟುಕೊಂಡಿದ್ದೇವೆ. ಸಿಎಂ ಹಾಗೂ ಡಿಸಿಎಂ ಕೂಡ ಈ ದಿನಾಂಕ ಕೊಟ್ಟಿದ್ದಾರೆ. ಆದರೆ ಕೆಲವು ಶಾಸಕರು ಅಧಿವೇಶನ ಮುಕ್ತಾಯದ ಬಳಿಕ ಮಾಡಿ ಎಂದು ಕೇಳುತ್ತಿದ್ದು, ಅಧಿವೇಶನದ ಬಳಿಕ ಭಾನುವಾರದಂದು ಈ ಸಮಾರಂಭ ಮಾಡುತ್ತೇವೆ” ಎಂದು ತಿಳಿಸಿದರು.
“ಬಿಜೆಪಿಯವರು ತಮ್ಮ ಹೋರಾಟವನ್ನು ಯತ್ನಾಳ್ ವಿರುದ್ಧ ಹೋರಾಟ ಮಾಡುತ್ತಾರೋ, ನಮ್ಮ ವಿರುದ್ಧ ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಕಡೆ ಮುನ್ನಡೆಯುತ್ತಿದೆ. ವಿರೋಧ ಪಕ್ಷಗಳು ಜನರ ಕಷ್ಟ ಅರಿತು ಅಭಿವೃದ್ಧಿ ಕಡೆಗೆ ಆದ್ಯತೆ ನೀಡಬೇಕು. ಸಕಾರಾತ್ಮಕ ನಿಲುವು ನೀಡಬೇಕು" ಎಂದರು.
ಯತ್ನಾಳ್ ಅವರು ದಾಖಲೆಗಳನ್ನು ಬಿಡುಗಡೆ ಮಾಡಲಿ. ವಿಜಯೇಂದ್ರ ಮಾತ್ರವಲ್ಲ, ಯತ್ನಾಳ್ ಅವರಿಗೂ ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ. ಅವರು ಕೂಡ ಆತ್ಮೀಯರು. ಅವರು ಕೂಡ ಶಿವಕುಮಾರ್ ಜತೆಗೆ ಉಭಯಕುಶಲೋಪರಿ ಚರ್ಚೆ ಮಾಡುತ್ತಿರುತ್ತಾರೆ. ಕೇವಲ ವಿಜಯೇಂದ್ರ ಬಗ್ಗೆ ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ನನಗೆ ಅವರ ಆಂತರಿಕ ವಿಚಾರ ಅಗತ್ಯವಿಲ್ಲ” ಎಂದು ಹೇಳಿದರು.