

ಮುಂಬೈ: ಒಂದು ಸಿನಿಮಾದಲ್ಲಿ ಹಲವಾರು ಪಾತ್ರಗಳು ಇರುತ್ತವೆ. ಪಾತ್ರಕ್ಕೆ ಹಾಗೂ ಕಲಾವಿದರಿಗೆ ತಕ್ಕಂತೆ ಸಂಭಾವನೆ ಫಿಕ್ಸ್ ಆಗುತ್ತದೆ. ಈ ಹಿಂದಿನಿಂದಲೂ ನಮಗೆಲ್ಲಾ ತಿಳಿದಿರುವಂತೆ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಅದು ಹೀರೋ ಮತ್ತು ಹೀರೋಯಿನ್. ಇತರೆ ಪಾತ್ರವರ್ಗಕ್ಕಿಂತಲೂ ಹೆಚ್ಚು ಪೇಮೆಂಟ್ ಈ ಎರಡು ಪಾತ್ರಗಳಿಗೆ ನಿಗದಿಯಾಗಿರುತ್ತದೆ. ಆದರೆ, ಚಿತ್ರೋದ್ಯಮದಲ್ಲಿ ನಟಿಮಣಿಯರಿಗಿಂತ (Actress) ಸ್ಟಾರ್ ನಟರಿಗೆ ಹೆಚ್ಚು ಸಂಭಾವನೆ ಸಿಗುವುದು ಬಹುತೇಕರಿಗೆ ತಿಳಿದಿರುವ ಸಂಗತಿ.
ಸಾಕಷ್ಟು ಸಿನಿಮಾಗಳಲ್ಲಿ ಖ್ಯಾತ ನಟರು ಬೃಹತ್ ಮೊತ್ತದ ಪೇಮೆಂಟ್ ಪಡೆದರೆ, ನಾಯಕಿಯರು ಅದರ ಅರ್ಧದಷ್ಟು ಹಣವನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಆದರೆ ಸ್ಟಾರ್ ನಟರಿಗೆ ಟಕ್ಕರ್ ಕೊಟ್ಟಿರುವ ಕೆಲವು ಹೀರೋಯಿನ್ಗಳು, ಹೀರೋಗಳು ಪಡೆಯುವ ಸಂಭಾವನೆಗಿಂತಲೂ ದುಬಾರಿ ಮೊತ್ತವನ್ನು ಪಡೆದಿರುವ ನಿದರ್ಶನಗಳು ನಮ್ಮ ಮುಂದಿವೆ. ಆ ಪೈಕಿ ಬಾಲಿವುಡ್ ನಾಯಕಿಯರು ಮುಂಚೂಣಿ. ನಟಿಯರಾದ ಆಲಿಯಾ ಭಟ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಕಂಗನಾ ರಣಾವತ್, ಶ್ರದ್ಧಾ ಕಪೂರ್ ಈ ಲಿಸ್ಟ್ನಲ್ಲಿ ಪ್ರಮುಖರು. ಅಸಲಿಗೆ ಯಾರು, ಯಾವ ಸಿನಿಮಾದಲ್ಲಿ ಯಾವ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
‘ಪದ್ಮಾವತ್’ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಬರೋಬ್ಬರಿ 12 ಕೋಟಿ ರೂ. ಸಂಭಾವನೆ ಪಡೆದಿದ್ದು, ನಾಯಕ ನಟ ಶಾಹಿದ್ ಕಪೂರ್ 7-8 ಕೋಟಿ ರೂ. ಸ್ವೀಕರಿಸಿದ್ದಾರೆ.
‘ರಾಜ್ಹಿ’ ಚಿತ್ರದಲ್ಲಿ ನಟನೆಗಾಗಿ ಆಲಿಯಾ 10 ಕೋಟಿ ರೂ. ಪಡೆದರೆ, ನಟ ವಿಕ್ಕಿ ಕೌಶಲ್ ಕೇವಲ ನಾಲ್ಕು ಕೋಟಿ ರೂ. ಪಡೆದಿದ್ದಾರೆ. ಇನ್ನು ‘ಸಡಕ್ 2’ ಸಿನಿಮಾದಲ್ಲಿಯೂ ಆದಿತ್ಯ ರಾಯ್ ಕಪೂರ್ಗೆ ಹೋಲಿಸಿದರೆ ಆಲಿಯಾ ಭಟ್ ಹೆಚ್ಚಿನ ಸಂಭಾವನೆ ಸ್ವೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
‘ಸ್ತ್ರೀ’ ಸಿನಿಮಾದ ನಟನೆಗಾಗಿ ಶ್ರದ್ಧಾ ಪಡೆದಿದ್ದು 7 ಕೋಟಿ ರೂ., ಇದು ನಟ ರಾಜ್ಕುಮಾರ್ ರಾವ್ಗೆ ಕೊಡಲಾದ ಸಂಭಾವನೆಗಿಂತ ಹೆಚ್ಚು ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಜತೆಗೆ ನಟಿಸಿದ ‘ಚಿಚ್ಚೋರ್’ ಚಿತ್ರಕ್ಕೂ ನಟಿ ಅಧಿಕ ಪೇಮೆಂಟ್ ಪಡೆದಿದ್ದಾರೆ.
ಬಾಲಿವುಡ್ ಅಂಗಳದಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಕಂಗನಾ, ‘ಜಡ್ಜ್ಮೆಂಟಲ್ ಹೈ ಕ್ಯಾ’ ಚಿತ್ರಕ್ಕಾಗಿ ಬರೋಬ್ಬರಿ 27 ಕೋಟಿ ರೂ. ಸಂಭಾವನೆ ಪಡೆದರೆ, ನಟ ರಾಜ್ಕುಮಾರ್ ರಾವ್ 8 ಕೋಟಿ ರೂ. ಪಡೆದಿದ್ದಾರೆ.
‘ಕೀ & ಕಾ’ ಸಿನಿಮಾದ ನಟನೆಗಾಗಿ ಕರೀನಾ ಕಪೂರ್ 20 ಕೋಟಿ ರೂ. ಸಂಭಾವನೆ ಪಡೆದಿದ್ದು, ನಟ ಅರ್ಜುನ್ ಕಪೂರ್ 5 ಕೋಟಿ ರೂ. ಸ್ವೀಕರಿಸಿದ್ದಾರೆ,(ಏಜೆನ್ಸೀಸ್).